ಮಂಡ್ಯದಲ್ಲಿ ಬಂದ್‌ಗೆ ಉತ್ತಮ ಸ್ಪಂದನೆ, ಅಂಗಡಿ ಮುಂಗಟ್ಟುಗಳು ಕ್ಲೋಸ್!

ಹೊಸದಿಗಂತ ವರದಿ ಮಂಡ್ಯ :

ವಿದ್ಯುತ್ ದರ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರ ಮತ್ತು ವಿದ್ಯುತ್ ನಿಗಮದ ವಿರುದ್ಧ ಮಂಡ್ಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ವಾಣಿಜ್ಯೋಧ್ಯಮಿಗಳು, ಸಂಘ ಸಂಸ್ಥೆಗಳ ಕಾರ‌್ಯಕರ್ತರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವೌನ ಪ್ರತಿಭಟನೆ ನಡೆಸಿದರು.
ನಗರದ ಮಹಾವೀರ ಭವನದಲ್ಲಿ ಪ್ರತಿಭಟನಾಕಾರರು, ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಾ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಸಹಾಯಕರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ವಿದ್ಯುತ್ ನಿಗಮಗಳು ಕೆಲ ದಿನಗಳ ಹಿಂದೆ ವಾಣಿಜ್ಯ, ಕೈಗಾರಿಕೆಗಳ ಹಾಗೂ ಗೃಹ ವಿದ್ಯುತ್ ದರಗಳನ್ನು ಏಕಾಏಕಿ ಶೇ. 30 ರಿಂದ 70ರಷ್ಟು ಹೆಚ್ಚಳ ಮಾಡಿದ್ದು, ಹೆಚ್ಚುವರಿ ಮಾಡಿರುವ ವಿದ್ಯುತ್ ದರ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.

ದರ ಹೆಚ್ಚಳದಿಂದಾಗಿ ಅದರಲ್ಲೂ ಬಹುಮುಖ್ಯವಾಗಿ ಕೈಗಾರಿಕಾ ವಲಯ ಹಾಗೂ ವಾಣಿಜ್ಯ ಉದ್ಯಮ ಮತ್ತು ವ್ಯಾಪಾರ ವಹಿವಾಟುಗಳಿಗೆ ಹೆಚ್ಚಿನ ಹೊರೆ ಉಂಟಾಗಿ ಮುಂದಿನ ದಿನಗಳಲ್ಲಿ ಕೈಗಾರಿಕೆ ಹಾಗೂ ವ್ಯಾಪಾರಗಳನ್ನು ನಡೆಸಲು ಆಗದೆ ಮುಚ್ಚುವ ಸ್ಥಿತಿ ಉಂಟಾಗಿದೆ. ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರವೇ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ತತ್ತರಿಸುವ ಜನತೆ ಮತ್ತೆ ದರ ಹೆಚ್ಚಳದಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಹೆಚ್ಚಳ ಮಾಡಿರುವ ದರವನ್ನು ತಕ್ಷಣ ಕಡಿತಗೊಳಿಸಬೇಕು. ಕೈಗಾರಿಕೆಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು. ವಾಣಿಜ್ಯ ಉದ್ದೇಶ ಮತ್ತು ಗೃಹ ಬಳಕೆಗೆ ಹೆಚ್ಚಿಸಿರುವ ಅವೈಜ್ಞಾನಿಕ ವಿದ್ಯುತ್ ದರವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು. ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು, ಕೈಗಾರಿಕೆಗಳು, ಸಂಘ ಸಂಸ್ಥೆಗಳ ಕಚೇರಿಗಳನ್ನು ಬಂದ್ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!