ಹೊಸದಿಗಂತ ಡಿಜಿಟಲ್‌ಡೆಸ್ಕ್:
ಬೆಂಗಳೂರು: ಗೂಳಿಹಟ್ಟಿ ಶೇಖರ್ ಅವರ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನಿಸಿ ಕೇಳಿದ್ದೇನೆ. ಅವರ ಆರೋಪ ಶುದ್ಧ ಸುಳ್ಳು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಆರೆಸ್ಸೆಸ್ ಕೇಂದ್ರ ಕಚೇರಿ, ಇತರ ಯಾವುದೇ ಕಚೇರಿಗಳಲ್ಲಿ ಜಾತಿ ಕೇಳಿ ಒಳಕ್ಕೆ ಬಿಡುವ ಪದ್ಧತಿಯೇ ಇಲ್ಲ. ನಾನು ಆರೆಸ್ಸೆಸ್, ವಿದ್ಯಾರ್ಥಿ ಪರಿಷತ್ತಿನಲ್ಲಿ ಬೆಳೆದ ಹುಡುಗ. ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಸ್ವಯಂಸೇವಕನಾಗಿದ್ದೆ. ನನ್ನ ಜಾತಿ ಬಗ್ಗೆ ಬಹಳ ಜನರಿಗೆ ಗೊತ್ತಾದುದು ಬಿಜೆಪಿಗೆ ಬಂದ ಬಳಿಕ ಎಂದು ತಿಳಿಸಿದರು.
ಸುಳ್ಳು ಸುದ್ದಿ ಹಬ್ಬಿಸಬೇಡಿ. ಆರೆಸ್ಸೆಸ್‍ನ ರಾಜ್ಯ, ಇತರ ರಾಜ್ಯಗಳ ಪದಾಧಿಕಾರಿಗಳ ಮನೆಗೂ ಹೋಗಿದ್ದೇನೆ. ಅವರ ಮನೆಯಲ್ಲೂ ಜಾತಿ ಕೇಳುವುದಿಲ್ಲ. ಅಲ್ಲಿ ಕೂಡ ಆತಿಥ್ಯ ಗಮನಿಸಿದರೆ, ಭೇದಭಾವ ಕಾಣಲಿಲ್ಲ. ಚರ್ಚೆಗಾಗಿ ಆರೆಸ್ಸೆಸ್ ಅನ್ನು ಎಳೆದು ತರುವುದು ನಿಲ್ಲಿಸಿ ಎಂದು ಹೇಳಿದರು.
ನಿಜ ಏನೆಂದು ತಿಳಿದುಕೊಳ್ಳದೆ ಮುಖ್ಯಮಂತ್ರಿ ಆದಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. ನೀವು ಕಾಂಗ್ರೆಸ್‍ನವರು ಬಾಬಾ ಸಾಹೇಬ ಡಾ.ಅಂಬೇಡ್ಕರರಿಗೆ ಏನು ಮಾಡಿದ್ದೀರಿ? ಇವತ್ತು ಅವರ ಪುಣ್ಯತಿಥಿ. ದೆಹಲಿಯಲ್ಲಿ ಅವರು ನಿಧನ ಹೊಂದಿದಾಗ ಅಲ್ಲಿ ಅಂತ್ಯಸಂಸ್ಕಾರಕ್ಕೆ ಜಾಗ ಕೊಡದೆ ಮುಂಬೈಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದೀರಲ್ಲವೇ? ಅಂಬೇಡ್ಕರರ ಬಗ್ಗೆ ನಿಮಗೆಷ್ಟು ಗೌರವ ಇದೆ ಎಂದು ಪ್ರಶ್ನಿಸಿದರು.