ಹೊಸದಿಗಂತ ವರದಿ,ಮಡಿಕೇರಿ:
ಹಿಮಪಾತಕ್ಕೆ ಸಿಲುಕಿ ಹುತಾತ್ಮರಾದ ಅಲ್ತಾಫ್ ಅಹ್ಮದ್ ಅವರ ಕುಟುಂಬದವರನ್ನು ಯಡಪಾಲ ಗ್ರಾಮದಲ್ಲಿ ಮಂಗಳವಾರ ಭೇಟಿ ಮಾಡಿದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜಿಮ್ ಅವರು ಸಾಂತ್ವನ ಹೇಳಿದರು.
ಹುತಾತ್ಮ ಅಲ್ತಾಫ್ ಅಹ್ಮದ್ ಕುಟುಂಬದವರ ಪರಿಸ್ಥಿತಿ, ಮಕ್ಕಳ ಶಿಕ್ಷಣ ಮತ್ತಿತರ ಬಗ್ಗೆ ಮಾಹಿತಿ ಪಡೆದ ಬಳಿಕ ಮಾತನಾಡಿದ ಅಬ್ದುಲ್ ಅಜಿಮ್ ಅವರು, ಹುತಾತ್ಮ ಅಲ್ತಾಫ್ ಅಹ್ಮದ್ ಅವರಿಗೆ ಇಬ್ಬರು ಮಕ್ಕಳಿದ್ದು, ಇವರಿಗೆ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡುವುದು, ಗೃಹ ಮಂಡಳಿಯಿಂದ ಮನೆ ಒದಗಿಸುವುದು, ಅಲ್ತಾಫ್ ಅಹ್ಮದ್ ಅವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ಕೊಡಿಸುವ ಬಗ್ಗೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲಾಗುವುದು ಎಂದರು.
ಅಲ್ಪಸಂಖ್ಯಾತ ಪ್ರಮುಖರ ಜೊತೆ ಸಮಾಲೋಚನೆ: ನಗರದ ಸುದರ್ಶನ ಅತಿಥಿ ಗೃಹದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಜೈನ್ ಸಮುದಾಯದ ಮುಖಂಡರ ಜೊತೆ ಅಬ್ದುಲ್ ಅಜೀಮ್ ಸಮಾಲೋಚನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಅಬ್ದುಲ್ ಅಜೀಮ್ ಅವರು, ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿ ಸೌಹಾರ್ದತೆಗೆ ಕೈಜೋಡಿಸಬೇಕು. ಯಾವುದೇ ಕಾರಣಕ್ಕೂ ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಪ್ರತಿಯೊಬ್ಬರೂ ಭ್ರಾತೃತ್ವ ಮತ್ತು ಸೌಹಾರ್ದತೆಯಿಂದ ಬದುಕಿದಾಗ ಮಾತ್ರ ಕುಟುಂಬ ಮತ್ತು ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹೋದರರಂತೆ ಒಂದಾಗಿ ಬದುಕಬೇಕು ಎಂದು ಸಲಹೆ ಮಾಡಿದರು.
ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಹಲವು ಯೋಜನೆಗಳಿದ್ದು, ಇವುಗಳನ್ನು ಪಡೆದುಕೊಳ್ಳಬೇಕು. ಎಲ್ಲರನ್ನೂ ಗೌರವದಿಂದ ಕಾಣಬೇಕು ಎಂದರು.
ಪರಿಹಾರ ದೊರಕಿಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ಕೆ.ಟಿ.ಬೇಬಿ ಮ್ಯಾಥ್ಯೂ ಅವರು, ವೀರಾಜಪೇಟೆಯ ರಾಯ್ ಡಿಸೋಜ ಅವರು ದೌರ್ಜನ್ಯದಿಂದ ಮೃತಪಟ್ಟಿದ್ದು, ಸಿಐಡಿ ತನಿಖೆಗೆ ವಹಿಸಿ ಒಂಭತ್ತು ತಿಂಗಳಾದರೂ, ಇದುವರೆಗೆ ನ್ಯಾಯ ಸಿಕ್ಕಿಲ್ಲ. ರಾಯ್ ಡಿಸೋಜ ಕುಟುಂಬಕ್ಕೆ ಒಂದು ಪೈಸೆಯೂ ಪರಿಹಾರ ಸಿಕ್ಕಿಲ್ಲ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಗಮನಕ್ಕೆ ತಂದರು.
ಈ ಸಂದರ್ಭ ಮಾತನಾಡಿದ ಜೋಕಿಮ್ ರಾಡಿಗಸ್ ಅವರು, ರಾಯ್ ಡಿಸೋಜ ಪ್ರಕರಣ ಸಂಬಂಧ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದಾರೆ ಎಂದು ತಿಳಿಸಿದರು.
ಪ್ರಮುಖರಾದ ಖಲೀಲ್ ಅವರು ಎಮ್ಮೆಮಾಡು ಸೇರಿದಂತೆ ಅಲ್ಪಸಂಖ್ಯಾತರು ಹೆಚ್ಚು ವಾಸ ಮಾಡುವ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಮನವಿ ಮಾಡಿದರು.
ನಗರಸಭೆ ಸದಸ್ಯ ಮನ್ಸೂರ್ ಅವರು ಮಾತನಾಡಿ, ಅಲ್ಪಸಂಖ್ಯಾತರಿಗಾಗಿ ಸರ್ಕಾರದಿಂದ ಸಾಕಷ್ಟು ಸವಲತ್ತುಗಳು ಇವೆ. ಆದರೆ ಸಮರ್ಪಕವಾಗಿ ತಲುಪಬೇಕು. ಪೊಲೀಸ್ ಠಾಣೆಗಳಲ್ಲಿ ಅಲ್ಪಸಂಖ್ಯಾತರ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ದೂರಿದರು.
10ಲಕ್ಷ ಪರಿಹಾರ ಒದಗಿಸಿ: ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷ ಹಕೀಂ ಅವರು ಮಾತನಾಡಿ, ಹುತಾತ್ಮ ಅಲ್ತಾಫ್ ಅಹ್ಮದ್ ಅವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಒದಗಿಸಬೇಕು. ಮಕ್ಕಳನ್ನು ಸೈನಿಕ ಶಾಲೆಗೆ ಸೇರಿಸಲು ಅವಕಾಶ ಮಾಡಬೇಕು. ಉಚಿತ ಶಿಕ್ಷಣ ಕೊಡಿಸಬೇಕು. ವೀರಾಜಪೇಟೆಯ ಪಟ್ಟಣದ ಯಾವುದಾದರೂ ರಸ್ತೆಗೆ ಹುತಾತ್ಮ ಅಲ್ತಾಫ್ ಅಹ್ಮದ್ ಅವರ ಹೆಸರಿಡಬೇಕು ಎಂದು ಮನವಿ ಮಾಡಿದರು.