Sunday, September 7, 2025

ರೈತರಿಗೆ ಸಮರ್ಪಕ ಭೂ ಪರಿಹಾರ ನೀಡಲು ಸರ್ಕಾರ ಬದ್ಧ: ಸಿಎಂ ಸಿದ್ಧರಾಮಯ್ಯ ಭರವಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಜಲಾಶಯಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಇಂದು ಆಲಮಟ್ಟಿ ಜಲಾಶಯದಲ್ಲಿ ಕೃಷ್ಣಾ ನದಿಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ನೆರವೇರಿಸಲಾಯಿತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾದ ಕಾರಣ ಆಲಮಟ್ಟಿ ಸೇರಿದಂತೆ ಕಬಿನಿ, ಕಾವೇರಿ, ಹೇಮಾವತಿ ಮತ್ತಿತರ ಜಲಾಶಯಗಳು ತುಂಬಿಕೊಂಡಿದ್ದು, ರೈತರ ಮುಖದಲ್ಲಿ ಸಂತೋಷ ಮೂಡಿಸಿದೆ ಎಂದು ತಿಳಿಸಿದ್ದಾರೆ.

ರೈತರ ಖುಷಿ ಸರ್ಕಾರದ ಖುಷಿಯೂ ಆಗಿದೆ ಎಂದು ಹೇಳಿದ್ದಾರೆ ಸಿಎಂ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಕುರಿತು ಅವರು ಮಾತನಾಡಿ, ರೈತರಿಗೆ ಸಮರ್ಪಕ ಭೂ ಪರಿಹಾರ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಇತ್ತೀಚೆಗೆ ಬೆಳಗಾವಿಯಲ್ಲಿ ಹೋರಾಟಗಾರರು, ರೈತರೊಂದಿಗೆ ನಡೆದ ಸಭೆಯಲ್ಲಿ “ಒಂದೇಬಾರಿ ಕನ್ಸೆಂಟ್ ಅವಾರ್ಡ್” ನೀಡುವಂತೆ ಆಗ್ರಹಿಸಿದ್ದನ್ನು ಸಿಎಂ ನೆನಪಿಸಿದರು. ಡಿಸಿಎಂ ಡಿ.ಕೆ. ಶಿವಕುಮಾರರ ನೇತೃತ್ವದಲ್ಲಿ ಸಭೆ ನಡೆದಿದ್ದು, ಪರಿಹಾರ ದರ ನಿಗದಿ ಮಾಡುವ ಪ್ರಕ್ರಿಯೆ ಮುಂದಿನ ವಾರ ಅಂತಿಮಗೊಳ್ಳಲಿದೆ ಎಂದು ತಿಳಿಸಿದರು.

ಡ್ಯಾಂನ ಎತ್ತರವನ್ನು 519.60 ಮೀಟರ್‌ನಿಂದ 524.26 ಮೀಟರ್‌ಗೆ ಏರಿಸುವುದರಿಂದ ಹೆಚ್ಚುವರಿ 130 ಟಿಎಂಸಿ ನೀರನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಇದರಿಂದ ಒಟ್ಟು 173 ಟಿಎಂಸಿ ನೀರನ್ನು 6.6 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಒದಗಿಸಲು ಅನುಕೂಲವಾಗಲಿದೆ. ಆದರೆ ಕೇಂದ್ರದಿಂದ ಗಜೆಟ್ ನೋಟಿಫಿಕೇಷನ್ ಇನ್ನೂ ಹೊರಬರಬೇಕಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು. ಈ ಕುರಿತಾಗಿ ತಾವು ಮೂರು ಬಾರಿ, ಡಿಸಿಎಂ ಐದು ಬಾರಿ ಕೇಂದ್ರ ಸಚಿವರನ್ನು ಭೇಟಿ ಮಾಡಿರುವುದನ್ನೂ ಅವರು ವಿವರಿಸಿದರು.

ಒಟ್ಟಾರೆಯಾಗಿ ರೈತರ ಬದುಕು ಹಸನಗೊಳಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಸಿಎಂ ಪುನರುಚ್ಚರಿಸಿದರು. ಯುಕೆಪಿ ಯೋಜನೆ ವಿಳಂಬವಾಗಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿ, 2010ರಲ್ಲಿ ಅವಾರ್ಡ್ ಆಗಿದ್ದರೂ ಇನ್ನೂ ಕೇಂದ್ರದ ನೋಟಿಫಿಕೇಷನ್ ಬಾರದ ಕಾರಣ ಕಾಮಗಾರಿಗೆ ಚಾಲನೆ ಸಿಗದೆ ಇದ್ದುದನ್ನು ವಿಷಾದಿಸಿದರು. ರೈತರ ಪರವಾಗಿ ಕೆಲಸ ಮಾಡುವ ನಮ್ಮ ಸರ್ಕಾರದ ಪ್ರಯತ್ನ ಮುಂದುವರಿಯುತ್ತದೆ ಎಂದು ಅವರು ಭರವಸೆ ನೀಡಿದರು.

ಇದನ್ನೂ ಓದಿ