ಹೊಸದಿಗಂತ ವರದಿ, ಚಿತ್ರದುರ್ಗ:
ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದರೂ ರಾಜ್ಯ ಸರ್ಕಾರ ಯಾವುದೇ ಪರಿಹಾರ ಕಾರ್ಯಕ್ಕೆ ಮುಂದಾಗಿಲ್ಲ. ಜನರ ಕಷ್ಟ ಆಲಿಸಬೇಕಾದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕೇವಲ ಅಧಿಕಾರಕ್ಕಾಗಿ ಕಿತ್ತಾಟ ನಡೆಸುತ್ತಿದ್ದಾರೆ ಎಂದು ವಿಧಾನಸಭಾ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿಕಾರಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳುವ ಚಿಂತೆಯಾದರೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಂದೆ ಯಾವ ರೀತಿ ಮುಖ್ಯಮಂತ್ರಿಯಾಗಬೇಕೆಂಬ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಯಾರಿಗೂ ಸಹ ರಾಜ್ಯದ ಜನರು, ರೈತರ ಬಗ್ಗೆ ಕಾಳಜಿ ಇಲ್ಲ ಎಂದು ದೂರಿದರು.
ರಾಜ್ಯ ಪೂರ್ಣ ಪ್ರಮಾಣದಲ್ಲಿ ಬರ ಆವರಿಸಿದೆ. ಮಳೆಯ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಬೆಳೆಗಳು ನಷ್ಟವಾಗಿ ರೈತ ಕಂಗಲಾಗಿದ್ದಾನೆ. ಮುಂದಿನ ಜೀವನ ಹೇಗೆ ಎಂದು ಗೊಂದಲಕ್ಕೆ ಈಡಾಗಿದ್ದಾನೆ. ಇದರ ಬಗ್ಗೆ ರಾಜ್ಯ ಸರ್ಕಾರದ ಚುನಾಯಿತ ಪ್ರತಿನಿಧಿಗಳಿಗೆ ಯಾವುದೇ ಕಾಳಜಿ ಇಲ್ಲ. ಇದರೊಂದಿಗೆ ಅಧಿಕಾರಿಗಳು ಸಹ ಆರಾಮಾಗಿ ಇದ್ದಾರೆ. ರಾಜ್ಯದಲ್ಲಿ ಬರದ ಜೊತೆಗೆ ವಿದ್ಯುತ್ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ರೈತರ ಪಂಪ್‌ಸೆಟ್‌ಗಳಿಗೆ ರಾತ್ರಿ ಸಮಯದಲ್ಲಿ ವಿದ್ಯುತ್ ನೀಡಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ಬೆಳೆಗಳಿಗೆ ನೀರು ಹಾಯಿಸಲು ಹೋದ ರೈತರು ವಿಷ ಜಂತುಗಳ ಕಡಿತಕ್ಕೆ ಒಳಗಾಗಿದ್ದಾರೆ. ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ೧೬೫ ಪ್ರಕರಣಗಳು ವರದಿಯಾಗಿವೆ. ಬೆಳೆನಷ್ಟವಾಗಿ ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರಕ್ಕೆ ಇದ್ಯವುದರ ಪರಿವೆಯೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದೆಲ್ಲೆಡೆ ಭೀಕರ ಬರಗಾಲ ತಾಂಡವ ಆಡುತ್ತಿದೆ. ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವುದನ್ನು ಬಿಟ್ಟು, ರಾಜ್ಯ ಸರ್ಕಾರ ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರ ನಮಗೆ ಸ್ಪಂದಿಸುತ್ತಿಲ್ಲ, ಹಣ ನೀಡುತ್ತಿಲ್ಲ ಎಂದು ಆರೋಪಿಸುವ ಕೆಲಸ ಮಾಡುತ್ತಿದೆ. ರಾಜ್ಯದ ಜನರಿಂದ ಆಯ್ಕೆಯಾಗಿ ಸರ್ಕಾರ ನಡೆಸುತ್ತಿರುವ ಕಾಂಗ್ರೇಸ್‌ನವರು ಏನು ಮಾಡುತ್ತಿದ್ದಾರೆ. ರಾಜ್ಯದ ೩೧ ಜಿಲ್ಲೆಗಳಲ್ಲಿ ಭೀಕರ ಬರ ಪರಿಸ್ಥಿತಿ ಆವರಿಸಿದ್ದು, ಇದನ್ನು ಸಮರ್ಕಪಕವಾಗಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರ ಸಮಸ್ಯೆಗಳನ್ನು ಆಲಿಸದೆ ಅಧಿಕಾರಕ್ಕಾಗಿ ದಿನನಿತ್ಯ ಬಡಿದಾಟ ಮಾಡುತ್ತಿದೆ. ಸಚಿವರು ಕೇವಲ ಅಧಿಕಾರ ಹಂಚಿಕೆಯ ಚಿಂತನೆಯಲ್ಲೇ ತೊಡಗಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರ ಬರದಲ್ಲಿ ತನ್ನ ಪಾಲಿನ ಪರಿಹಾರದ ಹಣ ಬಿಡುಗಡೆ ಮಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರದ ಕಡೆಗೆ ಕೈ ತೋರಿಸುತ್ತಿದೆ. ಕೇಂದ್ರ ಸರ್ಕಾರ ಏನೂ ಮಾಡಿಲ್ಲ ಎಂದು ರಾಜ್ಯದ ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ., ಇವರನ್ನು ಆಯ್ಕೆ ಮಾಡಿದ ಮತದಾರರಿಗೆ ರಾಜ್ಯ ಸರ್ಕಾರದಿಂದ ಬರ ಸಂಬಂಧ ಏನು ಮಾಡಿದ್ದಾರೆ. ಯಾವ ಸಚಿವರು ಪ್ರವಾಸ ಮಾಡಿದ್ದಾರೆ ಎಂಬುದನ್ನು ತೋರಿಸಲಿ. ಬರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ಮುಂದಿನ ದಿನಗಳಲ್ಲಿ ನೀಡುತ್ತದೆ. ಆದರೆ ರಾಜ್ಯ ಸರ್ಕಾರವಾಗಿ ಏನೂ ಮಾಡಿಲ್ಲ. ನಾವು ಪ್ರವಾಸ ಕೈಗೊಂಡ ಮೇಲೆ ರಾಜ್ಯ ಸರ್ಕಾರ ಜಿಲ್ಲಾವಾರು ಹಣ ಬಿಡುಗಡೆ ಮಾಡಲು ಮುಂದಾಗಿದೆ ಎಂದು ತಿಳಿಸಿದರು.
ಬರದಿಂದಾಗಿ ಜನ ಮತ್ತು ಜಾನುವಾರುಗಳಿಗೆ ತುಂಬಾ ತೊಂದರೆಯಾಗಿದೆ. ಕುಡಿಯುವ ನೀರು, ಮೇವಿನ ಕೂರತೆಯಾಗಿದೆ. ಸರ್ಕಾರ ಬರಗಾಲವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸದಾ ಅಧಿಕಾರದ ಹಂಚಿಕೆಯಲ್ಲಿ ಕಾಲ ಕಳೆಯುತ್ತಿದೆ. ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಲಾಗುವುದು. ರೈತರ ಪರವಾಗಿ ಬಿಜೆಪಿ ಧ್ವನಿ ಎತ್ತಿದೆ. ಸದನದ ಒಳಗೆ ಮತ್ತು ಹೂರಗೂ ಸಹ ರೈತರ ಪರವಾಗಿ ನಿಲ್ಲುವ ಕಾರ್ಯ ಮಾಡುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಎಂ.ಚಂದ್ರಪ್ಪ, ಹರಿಹರ ಶಾಸಕ ಬಿ.ಪಿ.ಹರೀಶ್, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಯುವ ಮುಖಂಡ ಅನಿತ್ ಕುಮಾರ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬಂಡವಾಡ, ಸಂಪತ್ ಕುಮಾರ್, ವೆಂಕಟೇಶ್ ಯಾದವ್, ನರೇಂದ್ರ, ಮಾಧುರಿ ಗೀರಿಶ್, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ ಉಪಸ್ಥಿತರಿದ್ದರು.