ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್ಗೇಟ್ ಕೊಚ್ಚಿಕೊಂಡು ಹೋಗಿ ಅಪಾರ ಪ್ರಮಾಣದ ನೀರು ವ್ಯರ್ಥವಾದ ಘಟನೆ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ, ಇದೀಗ ಆಯಸ್ಸು ಮುಗಿದಿರುವ ಕ್ರೆಸ್ಟ್ಗೇಟ್’ಗಳ ಬದಲಾವಣೆಗೆ ಮುಂದಾಗಿದೆ. ಇದರಿಂದಾಗಿ ಸದ್ಯ ಕ್ರಸ್ಟ್ ಗೇಟ್ ಬದಲಾವಣೆಗೆ ಟೆಂಡರ್ ಆಹ್ವಾನ ಮಾಡಿದೆ.
ತಜ್ಞರ ತಂಡವು ಅಣೆಕಟ್ಟಿನ ಎಲ್ಲಾ ಕ್ರೆಸ್ಟ್ ಗೇಟ್‌ಗಳನ್ನು ಬದಲಾಯಿಸಲು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಜಲಾಶಯದ ಮಂಡಳಿಯು ಇದೀಗ ಕ್ರೆಸ್ಟ್ ಗೇಟ್ ಬದಲಾವಣೆಗೆ ಟೆಂಡರ್’ಗೆ ಆಹ್ವಾನಿಸಿದೆ. ಅಧಿಕಾರಿಗಳ ನಡೆ ರೈತರು ನಿರಾಳಗೊಳ್ಳುವಂತೆ ಮಾಡಿದ್ದು, ಕ್ರೆಸ್ಟ್ಗೇಟ್ ಮರುಸ್ಥಾಪಿಸುವ ಕಾರ್ಯ ತಿಂಗಳೊಳಗೆ ಪ್ರಾರಂಭವಾಗುವ ನಿರೀಕ್ಷೆಗಳಿವೆ.
ಕಳೆದ ವರ್ಷ ಆಗಸ್ಟ್‌ನಲ್ಲಿ, ಭಾರೀ ಮಳೆಯ ನಡುವೆ ನೀರಿನ ಒಳಹರಿವು ಹೆಚ್ಚಾಗಿದ್ದ ಪರಿಣಾಮ ಕ್ರೆಸ್ಟ್ ಗೇಟ್ ಸಂಖ್ಯೆ 19 ಕೊಚ್ಚಿಕೊಂಜು ಹೋಗಿತ್ತು. ಈ ವೇಳೆ ಅಪಾರ ಪ್ರಮಾಣದ ನೀರು ವ್ಯರ್ಥವಾಗಿತ್ತು. ಬಳಿಕ ಹೈಡ್ರೊ ಮೆಕ್ಯಾನಿಕಲ್ ಎಂಜಿನಿಯರಿಂಗ್ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದ ತಂಡವು ತಾತ್ಕಾಲಿಕ ಗೇಟ್ ಅಳವಡಿಸಿ 50 ಟಿಎಂಸಿ ನೀರನ್ನು ಉಳಿಸಿತ್ತು.
ನಂತರ 33 ಕ್ರೆಸ್ಟ್ ಗೇಟ್‌ಗಳನ್ನು ಹೊಂದಿರುವ ಈ ಜಲಾಶಯದ ಕುರಿತು ಅಧ್ಯಯನ ಮಾಡಲು ರಾಜ್ಯ ಸರ್ಕಾರ ಕೇಂದ್ರ ಜಲ ಮಂಡಳಿಯ ಅಡಿಯಲ್ಲಿ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಇತ್ತೀಚೆಗೆ ತನ್ನ ವರದಿಯನ್ನು ಸಲ್ಲಿಸಿದ್ದು, ಎಲ್ಲಾ ಕ್ರೆಸ್ಟ್ ಗೇಟ್‌ಗಳನ್ನು ಬದಲಾಯಿಸಬೇಕು, ಹೊಸ ತಂತ್ರಜ್ಞಾನವನ್ನು ಪರಿಚಯಿಸಬೇಕು ಎಂದು ಶಿಫಾರಸು ಮಾಡಿತ್ತು.