ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿಯಲ್ಲಿ ನಡೆದ ಹಿಂಸಾಚಾರ ಹಾಗೂ ಓರ್ವ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೊಲೀಸ್ ಇಲಾಖೆಯ ಕೆಲಸಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
“ಜನವರಿ 6ರಂದು ಬಳ್ಳಾರಿಯಲ್ಲಿ ಡಿಸಿಎಂ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೋ ಇಲ್ಲವೋ? ಗೃಹ ಸಚಿವರು ಕೇವಲ ‘ಹೆಬ್ಬೆಟ್ಟು’ ಸಚಿವರಾ?” ಎಂದು ಪ್ರಶ್ನಿಸಿದ ಹೆಚ್‌ಡಿಕೆ, ಡಿಸಿಎಂ ಅವರಿಗೆ ಪೊಲೀಸ್ ಸಭೆ ನಡೆಸಲು ಅಧಿಕಾರ ನೀಡಿದವರು ಯಾರು ಎಂದು ಕೇಳಿದರು.
ಬಳ್ಳಾರಿ ಘಟನೆಯನ್ನು ಸರ್ಕಾರ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, “ಬ್ಯಾನರ್ ಕಟ್ಟುವ ಸಣ್ಣ ವಿಷಯಕ್ಕೆ ಬೀದಿಯಲ್ಲಿ ಗುಂಡು ಹಾರಿಸುವುದು ಎಷ್ಟು ಸರಿ? ಮರಣೋತ್ತರ ಪರೀಕ್ಷೆಯ ನಂತರ ಕುಟುಂಬದವರಿಗೆ ಅಂತಿಮ ವಿಧಿವಿಧಾನಕ್ಕೆ ಅವಕಾಶ ನೀಡದೆ, ಪೊಲೀಸರು ತರಾತುರಿಯಲ್ಲಿ ಶವ ಸಂಸ್ಕಾರ ಮಾಡಿದ್ದೇಕೆ? ಯಾರನ್ನು ರಕ್ಷಿಸಲು ಈ ಧಾವಂತ?” ಎಂದು ಸರ್ಕಾರದ ನಡೆಯನ್ನು ಪ್ರಶ್ನಿಸಿದರು.
ಕಾಂಗ್ರೆಸ್ ರಚಿಸಿರುವ ಸತ್ಯಶೋಧನಾ ಸಮಿತಿಯ ಬಗ್ಗೆ ವ್ಯಂಗ್ಯವಾಡಿದ ಅವರು, “ಖುದ್ದು ಕಾಂಗ್ರೆಸ್ ಕಾರ್ಯಕರ್ತರೇ ತಮ್ಮ ಪಕ್ಷದ ಶಾಸಕರ ವಿರುದ್ಧ ದೂರು ನೀಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಸಮಿತಿಗೆ ಯಾವ ಮಾಹಿತಿ ನೀಡಲು ಸಾಧ್ಯ? ಈ ತನಿಖೆಯ ಫಲಿತಾಂಶವೇನು ಎಂಬುದು ಮೊದಲೇ ಗೊತ್ತಿದೆ” ಎಂದು ಟೀಕಿಸಿದರು.

