ಹೊಸದಿಗಂತ ವರದಿ, ಗದಗ:
ಅವಳಿ ನಗರದಲ್ಲಿ ರಂಗ ಪಂಚಮಿಯ ಅಂಗವಾಗಿ ಜರುಗಿದ ಮೆರವಣಿಗೆಯಲ್ಲಿ ಕಿಲ್ಲಾ ಚಂದ್ರಸಾಲಿಯ ಕಾಮ-ರತಿ ಈ ಬಾರಿ ಸುಮಾರು 20 ಕೆಜಿ ಬಂಗಾರದ ಆಭರಣಗಳನ್ನು ಧರಿಸಿದರೆ, ದಾಸರ ಓಣಿಯ ಕಾಮ-ರತಿ ಸುಮಾರು 12 ಕೆ.ಜಿ. ಬಂಗಾರದ ಅಭರಣಗಳನ್ನು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲರನ್ನೂ ಅತ್ಯಾಕರ್ಷಿಸಿದವು.
ಅವಳಿ ನಗರದಲ್ಲಿ ಶತಮಾನಗಳಿಂದ ಸರಕಾರಿ ಕಾಮ-ರತಿಗಳು ಎಂದು ಕರೆಯಲ್ಪಡುವ ಇವುಗಳಿಗೆ ಸೂಕ್ತ ಬಂದೋಬಸ್ತನೊಂದಿಗೆ ವಿಶೇಷ ಭದ್ರತೆ ನೀಡಲಾಗುತ್ತದೆ. ಭಕ್ತರಿಗೆ ಬೇಡಿದ ವರವಕೊಡುವ ಕಾಮ-ರತಿಗಳಾದ ಇವುಗಳಿಗೆ ಇಲ್ಲಿ ನಿವಾಸಿಗಳು ಸಂಕಲ್ಪ ಮಾಡಿಕೊಂಡು ತಾವು ಧರಿಸುವ ಬಂಗಾರದ ಆಭರಣಗಳನ್ನು ಕಾಮ-ರತಿಗಳಿಗೆ ನೀಡುತ್ತಾರೆ. ಸಂಘಟಕರು ಇವುಗಳನ್ನು ಕಾಮ-ರತಿಗಳಿಗೆ ಆಲಂಕರಿಸಿ ಐದು ದಿನಗಳವರೆಗೆ ಪ್ರತಿಷ್ಠಾಪನೆ ಮಾಡಿ ನಂತರ ಮೆರವಣಿಗೆ ಮಾಡಿದ ನಂತರ ಆಭರಣಗಳನ್ನು ಮಾಲಿಕರಿಗೆ ನೀಡುತ್ತಾರೆ. ಶತಮಾನಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.