ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸರಕಾರ ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಮೀನುಗಾರಿಕೆ ಇಲಾಖೆ ಶನಿವಾರ ಆಯೋಜಿಸಿದ್ದ ‘ವಿಶ್ವ ಮೀನುಗಾರಿಕಾ ದಿನಾಚರಣೆ ಮತ್ತು 2025ರ ಮತ್ಸ್ಯ ಮೇಳ’ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಲಾಖೆಯನ್ನು ಮತ್ತು ಮೀನುಗಾರ ಕುಟುಂಬಗಳನ್ನು ಅಭಿವೃದ್ಧಿಪಡಿಸಲು ಕರಾವಳಿಯವರೇ ಆದ ಮಂಕಾಳ ವೈದ್ಯ ಅವರನ್ನೇ ಮಂತ್ರಿ ಮಾಡಿದ್ದೇವೆ. ಇವರು ಉತ್ತಮವಾಗಿ ಇಲಾಖೆಯನ್ನು ನಿರ್ವಹಿಸುತ್ತಿದ್ದಾರೆ. ಮೀನುಗಾರ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 320 ಕಿ.ಮೀ. ಕರಾವಳಿ ಪ್ರದೇಶ ಇದೆ. 5.5 ಲಕ್ಷ ಹೆಕ್ಟೇರ್ ಒಳನಾಡು ಜಲಪ್ರದೇಶ ಇದೆ. ಮೀನು ರಫ್ತಿನಲ್ಲಿ ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ. ದೇಶದ ಮೀನು ಉತ್ಪಾದನೆಯಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ. ಒಟ್ಟಾರೆ ಮೀನುಗಾರಿಕೆ 10 ಲಕ್ಷ ಜನರ ಜೀವನ ಆಸರೆಯಾಗಿದೆ ಎಂದು ಅವರು ತಿಳಿಸಿದರು.
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಯಾಂತ್ರೀಕೃತ ದೋಣಿಗಳ ಡೀಸೆಲ್ ವಾರ್ಷಿಕ ಮಿತಿಯನ್ನು 1.5 ಲಕ್ಷ ಕಿ.ಲೋ ಲೀಟರ್‌ನಿಂದ 2 ಲಕ್ಷ ಕಿ.ಲೋ ಲೀಟರ್‌ಗೆ ಹೆಚ್ಚಿಸಲಾಗಿದೆ. ನಾಡ ದೋಣಿಗಳಿಗೆ ಕೈಗಾರಿಕಾ ಸೀಮೆ ಎಣ್ಣೆಯನ್ನು ಪ್ರತೀ ಲೀಟರ್‌ಗೆ 35 ರೂ. ರಿಯಾಯಿತಿ ದರದಲ್ಲಿ ವಿತರಣೆ ಮಾಡುತ್ತಿದ್ದೇವೆ. ಒಟ್ಟಾರೆ ಮೀನುಗಾರ ಸಮುದಾಯದ ಏಳಿಗೆಗೆ ಸರ್ಕಾರ ಪ್ರತೀ ಬಜೆಟ್‌ನಲ್ಲೂ ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

