January18, 2026
Sunday, January 18, 2026
spot_img

ಒಲಿಂಪಿಕ್ಸ್ ಪದಕ ವಿಜೇತರಿಗೆ ಸರ್ಕಾರದಿಂದ 6 ಕೋಟಿ ನಗದು ಬಹುಮಾನ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ ಒಲಿಂಪಿಕ್ಸ್ ಪದಕ ವಿಜೇತರಿಗೆ ಕರ್ನಾಟಕ ಸರ್ಕಾರ 6 ಕೋಟಿ ರೂ. ನಗದು ಬಹುಮಾನ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಕ್ರೀಡಾಕೂಟದಲ್ಲಿ ಒಂದು ವಿಭಾಗದಿಂದ 720 ಕ್ರೀಡಾಪಟುಗಳಂತೆ 5 ವಿಭಾಗಗಳಿಂದ ಒಟ್ಟು 3600 ಕ್ರೀಡಾಪಟುಗಳು ಭಾಗವಹಿಸಿದ್ದು,ಎಲ್ಲಾ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿಗಳು ಶುಭಕೋರಿದರು.

ಸೋಲು-ಗೆಲುವುಗಳಿಗಿಂತ ಕ್ರೀಡಾ ಮನೋಭಾವ ಮುಖ್ಯ. ಇಂದು ಚಾಮುಂಡಿ ವಿಹಾರ ಕ್ರೀಡಾಂಗಣದ ಗ್ಯಾಲರಿ ಹಾಗೂ ಈಜು ಕೊಳಗಳಿಗೆ ಅತ್ಯಾಧುನಿಕ ಟೆನ್ಸೈಲ್ ಮೆಂಬ್ರೇನ್ ಚಾವಣಿ ಅಳವಡಿಸುವ ಮತ್ತು ಫುಟ್ಬಾಲ್ ಅಂಕಣ ನಿರ್ಮಿಸುವ ಕಾಮಗಾರಿಯನ್ನು ರೂ. 20.78 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.

ಕ್ರೀಡಾಪಟುಗಳಿಗೆ ಸರ್ಕಾರದ ನೆರವು
ಸರ್ಕಾರ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದೆ. ಮುಂದಿನ ಒಲಿಂಪಿಕ್ಸ್‌ಗೆ ತರಬೇತಿ ಪಡೆಯಲು ರಾಜ್ಯದ 60 ಅತ್ಯಂತ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ವಾರ್ಷಿಕ ತಲಾ ರೂ 10 ಲಕ್ಷ ಸಹಾಯಧನ ನೀಡಿ ತರಬೇತಿ ನೀಡಲಾಗುವುದು. ಅಲ್ಲದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಸರ್ಕಾರ 6 ಕೋಟಿ ರೂ.ಗಳ ನಗದು ಬಹುಮಾನವನ್ನೂ ನೀಡಲಿದೆ. ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಒದಗಿಸಲು ಎಲ್ಲ ಇಲಾಖೆಗಳಲ್ಲಿ ಶೇ.2ರಷ್ಟು ಮೀಸಲಾತಿಯನ್ನೂ ಹಾಗೂ ಪೊಲೀಸ್ ಇಲಾಖೆಯಲ್ಲಿ 2 ರಿಂದ ಶೇ.3 ರಷ್ಟು ಕ್ರೀಡಾಮೀಸಲಾತಿಯನ್ನು ನೀಡಲಾಗುತ್ತಿದೆ ಎಂದರು.‌

ಸಮಾರಂಭದಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಭಾಗವಹಿಸಿದರು.

Must Read

error: Content is protected !!