ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಡಿ ರಕ್ಷಣೆ, ಭಾಷಾ ಹಿತಾಸಕ್ತಿಗೆ ಸರ್ಕಾರ ಬದ್ಧವಾಗಿದ್ದು, ಬೆಳಗಾವಿ ಗಡಿಯ ೧೦ ಗ್ರಾಮದಲ್ಲಿ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಸರ್ಕಾರ ಶೀಘ್ರದಲ್ಲಿಯೇ ಆದೇಶ ನೀಡಲಿದೆ. ಅವಶ್ಯವೆನಿಸಿದಲ್ಲಿ ಅಂಗವಾಡಿ ಕೇಂದ್ರಗಳನ್ನೂ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗಡಿ ಪ್ರದೇಶಗಳ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಆಶ್ರಯದಲ್ಲಿ ಆಯೋಜಿಸಲಾದ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕೃತಿಕ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡಿಗರು ಸರ್ವಭಾಷಿಕರೊಂದಿಗೆ ಸಹಬಾಳ್ವೆ ನಡೆಸುವ ಔದಾರ್ಯ ತೋರಿಸಿದ್ದಾರೆ. ಗಡಿಯಲ್ಲಿರುವ ಎಲ್ಲ ಭಾಷಿಕರೂ ಕರ್ನಾಟಕದವರೇ ಆಗಿದ್ದು, ಕರ್ನಾಟಕ ರಾಜ್ಯೋತ್ಸವದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಬೆಳಗಾವಿ ಗಡಿ ವಿವಾದ ಮುಗಿದ ಅಧ್ಯಯವಾಗಿದೆ. ಗಡಿ ವಿಷಯ ವಿಷಯ ಕುರಿತು ಮಹಾಜನ್ ವರದಿಯನ್ನು ಈ ಹಿಂದಿನಿಂದ ಕರ್ನಾಟಕ ಸರ್ಕಾರ ಒಕ್ಕೋರಿಲಿನಿಂದ ಒಪ್ಪಿಕೊಂಡಿದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮದಲ್ಲಿ ಸಂಸದ ಜಗದೀಶ ಶೆಟ್ಟರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಬೆಳಗಾವಿ ಗಡಿಯ 10 ಗ್ರಾಮಗಳಲ್ಲಿ ಸರ್ಕಾರಿ ಕನ್ನಡ ಶಾಲೆ ಆರಂಭಿಸಲು ಶೀಘ್ರದಲ್ಲಿ ಸರ್ಕಾರ ನಿರ್ಧಾರ: ಸಚಿವ ಎಚ್.ಕೆ. ಪಾಟೀಲ್
