ಹೊಸದಿಗಂತ ವರದಿ,ದಾವಣಗೆರೆ:
ಸರ್ಕಾರದ ಜಾತಿ ಗಣತಿ ಸರಿಯಾಗಿಲ್ಲ. ನಮ್ಮಲ್ಲೂ ಹಣವಿದೆ. ವೀರಶೈವ ಲಿಂಗಾಯತ ಮಹಾಸಭಾದಿಂದಲೇ ಜನಗಣತಿ ಮಾಡಿಸುತ್ತೇವೆ ಎಂದು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸವಾಲು ಹಾಕಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾವು ವೀರಶೈವ ಲಿಂಗಾಯಿತರು 2 ಕೋಟಿಯಷ್ಟು ಜನ ಇದ್ದೇವೆ. ಆದರೆ ಸರ್ಕಾರದ ಜಾತಿ ಗಣತಿಯಲ್ಲಿ ಕಡಿಮೆ ಸಂಖ್ಯೆ ತೋರಿಸಿದ್ದಾರೆ. ಕಾಂತರಾಜ್ ತಯಾರಿಸಿದ್ದಾರೋ, ಹೆಗಡೆ ತಯಾರಿಸಿದ್ದಾರೋ ಅವರ್‍ಯಾರೋ ಗೊತ್ತಿಲ್ಲ. ಸರ್ಕಾರದ ಜಾತಿ ಗಣತಿಗಂತೂ ನಮ್ಮ ವಿರೋಧ ಇದ್ದೇ ಇದೆ ಎಂದು ಸ್ಪಷ್ಟಪಡಿಸಿದರು.
10 ವರ್ಷದ ಹಿಂದಿನ ಕಸದ ಬುಟ್ಟಿಯಲ್ಲಿ ಬಿದ್ದಿದ್ದ ಜಾತಿಗಣತಿ ವರದಿ ಕೊಟ್ಟಿದ್ದಾರೆ, ಇವರು ಪಡೆದಿದ್ದಾರೆ. ಮುಖ್ಯಮಂತ್ರಿಗಳು ಜಾತಿ ಗಣತಿ ವರದಿಯನ್ನು ಸ್ವೀಕರಿಸಿದ್ದಾರೆ. ಆದರೆ ಇನ್ನೂ ಅಂಗೀಕಾರ ಮಾಡಿಲ್ಲ. ಜಾತಿ ಗಣತಿ ವರದಿ ಅಂಗೀಕರಿಸಲು ನಮ್ಮ ವಿರೋಧ ಇದೆ. ಮುಂದಿನ ನಡೆ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಒಂದು ವೇಳೆ ಸರ್ಕಾರ ವರದಿಯನ್ನು ಅಂಗೀಕರಿಸಲು ಮುಂದಾದರೆ ವೀರಶೈವ ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು ಎಲ್ಲಾ ಸೇರಿ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಸಿದರು.