ಹೊಸದಿಗಂತ ವರದಿ,ಬಳ್ಳಾರಿ:
ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ 10 ಕೆಜಿ ಅಕ್ಕಿ ನೀಡದೇ ಪಡಿತರದಾರರ ಖಾತೆಗೆ ಹಣ ನೀಡಲು ಮುಂದಾಗಿರುವುದು ಸರಿಯಲ್ಲ, ಇದಕ್ಕೆ ಬಳ್ಳಾರಿ ಜಿಲ್ಲಾ ಪಡಿತರ(ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘ) ವಿತರಕರ ಸಂಘವು ಆಕ್ಷೇಪವಿದೆ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರ (ಪಡಿತರ ವಿತರಕರ) ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವೆಂಕಟೇಶ ಹೆಗಡೆ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಸರ್ಕಾರ ಕೊಟ್ಟ ಮಾತಿನಂತೆ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡಬೇಕು, ಅದರ ಬದಲಾಗಿ 5ಕೇ ಜಿ ಅಕ್ಕಿ ಹಾಗೂ 5ಕೇಜಿ ಅಕ್ಕಿಯ ಬದಲು ಹಣ ನೀಡುವ ನಿರ್ಧಾರ ಸರಿಯಲ್ಲ, ಇದು ರಾಜ್ಯದ ಜನರಿಗೆ ನೀಡಿದ ಮಾತು ತಪ್ಪಿದಂತಾಗಲಿದೆ. ಈ ಹಿನ್ನೆಲೆ ಪಡಿತರದಾರರ ಖಾತೆಗೆ ಹಣ ಹಾಕುವ ಬದಲು ಆಹಾರ ಧಾನ್ಯಗಳಾದ ಸಕ್ಕರೆ, ಗೋಧಿ, ಜೋಳ, ರಾಗಿ ಸೇರಿದಂತೆ ವಿವಿಧ ಆಹಾರ ಧಾನ್ಯಗಳನ್ನು ರೈತರಿಂದ ನೇರವಾಗಿ ಖರೀದಿಸಲು ಮುಂದಾಗಬೇಕು, 3 ಕೆ.ಜಿ ರಾಗಿ, 2 ಕೆ.ಜಿ ಗೋಧಿ ಮತ್ತು ಈಗಾಗಲೇ ಬಿಪಿಎಲ್ ಪಡಿತರದಾರರಿಗೆ 5 ಕೆ.ಜಿ ಅಕ್ಕಿ, ಕೊಡುತ್ತಿರುವುದರಿಂದ ಒಟ್ಟು 10 ಕೆ.ಜಿ ಕೊಟ್ಟಂತಾಗಲಿದೆ. ಇದು ಸರ್ಕಾರಕ್ಕೆ ಹೆಸರು ಬರಲಿದೆ, ನೀಡಿದ ಮಾತುನಂತೆ ನಡೆದುಕೊಂಡಂತಾಗಲಿದೆ, ಜೊತೆಗೆ ರಾಜ್ಯದ ನಮ್ಮ ರೈತರಿಗೂ ಅನುಕೂಲವಾಗಲಿದೆ. ಸಕ್ಕರೆ ನೀಡಿದರೇ, ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೂ ಹಾಗೂ ಕಬ್ಬು ಬೆಳೆಗಾರರಿಗೂ ಮತ್ತಷ್ಟು ಶಕ್ತಿ ಬಂದಂತಾಗಲಿದೆ. ಆಹಾರ ಧ್ಯಾನಗಳ ಬದಲು, ಪಡಿತರ ದಾರರಿಗೆ ಹಣ ನೀಡುವ ನಿರ್ಧಾರ ಸರಿಯಲ್ಲ. ಈ ಹಿಂದೆ ಕೇಂದ್ರ ಸರ್ಕಾರ ಪುದುಚೇರಿ ಮತ್ತು ಛತ್ತೀಸ್ ಘಡದಲ್ಲಿ ಅಕ್ಕಿ ಬದಲು ಹಣ ನೀಡುವ ಯೋಜನೆ ಆರಂಭಿಸಿತ್ತು. ಯೋಜನೆ ಆರಂಭವಾಗಿ ಕೆಲ ತಿಂಗಳಲ್ಲೇ ಸ್ಥಗಿತಗೊಳಿಸಿತ್ತು. ಈಗ ರಾಜ್ಯ ಸರ್ಕಾರ ಅದೇ ಮಾದರಿಯನ್ನೇ ಅನುಸರಿಸುತ್ತಿರುವುದು ಸರಿಯಲ್ಲ.10 ಕೆ.ಜಿ ಅಕ್ಕಿ ಅಥವಾ ಆಹಾರ ದಾನ್ಯಗಳನ್ನು ನೀಡದ್ದಲ್ಲಿ, ನಾವುಗಳು ಪಡಿತರದಾರರಿಗೆ ವಿತರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.