ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಹನ ತಯಾರಿಕೆ ಉದ್ಯಮಕ್ಕೆ ಉತ್ತೇಜನ ನೀಡುವ ಜತೆಗೆ, ಪರಿಸರ ಮಾಲಿನ್ಯ ಕಡಿಮೆ ಮಾಡುವುದು ಸರ್ಕಾರದ ಗುರಿ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ದೆಹಲಿ ಸಮೀಪದ ಗ್ರೇಟರ್ ನೋಯ್ಡಾದಲ್ಲಿಂದು ‘ ತಾಯಿಯ ಹೆಸರಲ್ಲಿ ಒಂದು ಗಿಡ – 2.0 ‘ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಪಳೆಯುಳಿಕೆ ಇಂಧನದ ಬದಲಿಗೆ ಪರಿಸರ ಸ್ನೇಹಿ ಇಂಧನ ಬಳಕೆಗೆ ಆದ್ಯತೆ ನೀಡಲಾಗಿದೆ ಎಂದರು. ದಶಕದ ಹಿಂದೆ ಭಾರತ ವಾಹನಗಳ ತಯಾರಿಕೆಯಲ್ಲಿ 14ನೇ ಸ್ಥಾನದಲ್ಲಿದ್ದು, ಇದೀಗ ಜಪಾನ್ ಅನ್ನು ಹಿಂದಿಕ್ಕೆ ಮೂರನೇ ಸ್ಥಾನಕ್ಕೇರಿದೆ. ಪ್ರಥಮ ಸ್ಥಾನದಲ್ಲಿರುವ ಅಮೆರಿಕದ ವಾಹನ ಉತ್ಪಾದನಾ ಕೈಗಾರಿಕೆ ಮೌಲ್ಯ 78 ಲಕ್ಷ ಕೋಟಿ ರೂಪಾಯಿ, 2ನೇ ಸ್ಥಾನದ ಚೈನಾ 49 ಲಕ್ಷ ಕೋಟಿ ರೂಪಾಯಿ ಮೌಲ್ಯ ಹೊಂದಿದ್ದು, ನಂತರದ ಸ್ಥಾನದಲ್ಲಿರುವ ಭಾರತ 22 ಲಕ್ಷ ಕೋಟಿ ರೂಪಾಯಿ ಮೌಲ್ಯ ಹೊಂದಿದೆ. ಇನ್ನು 5 ವರ್ಷಗಳಲ್ಲಿ ಈ ವಲಯದಲ್ಲಿ ಭಾರತವನ್ನು ಅಗ್ರ ಸ್ಥಾನಕ್ಕೇರಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
ಸುಮಾರು 4.5 ಕೋಟಿ ಯುವಜನರಿಗೆ ಉದ್ಯೋಗಾವಕಾಶ ಒದಗಿಸಿರುವ ಆಟೋಮೊಬೈಲ್ ವಲಯ ಸರ್ಕಾರಕ್ಕೆ ಜಿಎಸ್ ಟಿ ರೂಪದಲ್ಲಿ ಅತಿಹೆಚ್ಚು ತೆರಿಗೆ ಒದಗಿಸುವ ಹಾಗೂ ಅತಿಹೆಚ್ಚು ರಫ್ತು ಮೌಲ್ಯ ಹೊಂದಿರುವ ಕ್ಷೇತ್ರವಾಗಿದೆ. ಜತೆಗೆ ಅತಿಹೆಚ್ಚು ಮಾಲಿನ್ಯ ಉಂಟುಮಾಡುವ ವಲಯವೂ ಆಗಿದೆ. ಹೀಗಾಗಿ ತಾಯಿಯ ಹೆಸರಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮ ಪರಿಸರ ರಕ್ಷಣೆ ನಿಟ್ಟಿನಲ್ಲಿ ಮಹತ್ವದ್ದಾಗಿದೆ ಎಂದರು.