ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಲಾದ ಮಸೂದೆಗಳಿಗೆ ರಾಜ್ಯಪಾಲ ಆರ್.ಎನ್ ರವಿ ಅವರು ಒಪ್ಪಿಗೆ ನೀಡದೇ ತಡೆಹಿಡಿದಿರುವ ಕ್ರಮಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ಈ ನಡೆ ಸಂವಿಧಾನದ ಉಲ್ಲಂಘನೆಯಾಗಿದ್ದು, ರಾಜ್ಯ ಸರ್ಕಾರದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವಂತಿಲ್ಲ ಎಂದು ಆದೇಶಿಸಿದೆ.
ತಮಿಳುನಾಡು ಸರ್ಕಾರವು ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ರಾಜ್ಯಪಾಲ ಆರ್.ಎನ್ ರವಿ ಅವರು ಹತ್ತು ಮಸೂದೆಗಳನ್ನು ಒಪ್ಪಿಗೆಗಾಗಿ ತಡೆಹಿಡಿದಿದ್ದರು, ಇದರಲ್ಲಿ ಶಿಕ್ಷಣ, ಆಡಳಿತ ಸುಧಾರಣೆ ಮತ್ತು ಸ್ಥಳೀಯ ಆರೋಗ್ಯ ಕಾಯ್ದೆಗಳು ಸೇರಿದ್ದವು. ಈ ಮಸೂದೆಗಳನ್ನು ವಿಧಾನಸಭೆಯಲ್ಲಿ ಮರು ಅಂಗೀಕರಿಸಿದ ನಂತರವೂ ರಾಜ್ಯಪಾಲರು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿದ್ದು ಇವುಗಳನ್ನು ಅನುಮೋದಿಸಿಲ್ಲ ಎಂದು ಆರೋಪಿಸಿ ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠವು , ಫೆಬ್ರವರಿ 10 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ನೀಡುತ್ತಾ, ರಾಜ್ಯಪಾಲರು ಸಂವಿಧಾನದ 200ನೇ ವಿಧಿಯಡಿ ರಾಜ್ಯ ಸರ್ಕಾರದ ಸಲಹೆಗೆ ಬದ್ಧರಾಗಿರಬೇಕು. ಮಸೂದೆಗಳನ್ನು ಅನಿರ್ದಿಷ್ಟವಾಗಿ ತಡೆಹಿಡಿಯುವ ಅಧಿಕಾರ ಅವರಿಗಿಲ್ಲ ಎಂದು ಹೇಳಿದೆ.
ರಾಜ್ಯಪಾಲರು ಮಸೂದೆಯನ್ನು ವೀಟೋ ಮಾಡಲು ಅಥವಾ ಪಾಕೆಟ್ ವೀಟೋ ಮಾಡಲು ಸಾಧ್ಯವಿಲ್ಲ, ಮಸೂದೆಗಳನ್ನು ಸೀಟಿನ ಕೆಳಗಿಟ್ಟುಕೊಂಡು ಕೂರುವಂತಿಲ್ಲ. ರಾಜ್ಯಪಾಲರು ಮಸೂದೆಯನ್ನು ಅನುಮೋದಿಸಬಹುದು ಅಥವಾ ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಬಹುದು. ರಾಜ್ಯಪಾಲರು ಮಸೂದೆಯನ್ನು 2ನೇ ಬಾರಿಗೆ ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಸುವಂತೆ ಕೇಳುವ ಮೂಲಕ ಅದನ್ನು ತಡೆಯಲು ಸಾಧ್ಯವಿಲ್ಲ. ರಾಜ್ಯಪಾಲರು 2ನೇ ಬಾರಿಗೆ ಮಸೂದೆಯನ್ನು ಅನುಮೋದಿಸಬೇಕು, ಆದರೆ ಎರಡನೇ ಮಸೂದೆಯು ಮೊದಲನೆಯದಕ್ಕಿಂತ ಭಿನ್ನವಾಗಿರಬೇಕು ಎಂದು ಕೋರ್ಟ್ ಹೇಳಿದೆ. ಅದನ್ನು ಮೂರು ತಿಂಗಳೊಳಗೆ ಅನುಮೋದಿಸಬೇಕು ಎಂದು ಕೋರ್ಟ್ ಹೇಳಿದೆ.