ಕ್ಯಾಬಿನೆಟ್ ನಿರ್ಧಾರದ ವಿಚಾರದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಲಿ: ಸಿ.ಟಿ.ರವಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಡಿ.ಕೆ.ಶಿವಕುಮಾರ್ ಅವರ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸಚಿವಸಂಪುಟ ಹಿಂದಕ್ಕೆ ಪಡೆದಿದೆ. ಇದು ಸಂವಿಧಾನ ವಿರೋಧಿ ಕ್ರಮ. ರಾಜ್ಯಪಾಲರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಅವರು ಮನವಿ ಮಾಡಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ಬ್ಲ್ಯಾಕ್‍ಮೇಲ್ ಪಾಲಿಟಿಕ್ಸ್ ನಡೆದಿದೆ. ಅದರ ಅಂಗವಾಗಿ ಇಡೀ ಸಂಪುಟ, ಜನ ಏನೆಂದುಕೊಳ್ಳುವರೋ ಎಂಬುದನ್ನು ಯೋಚಿಸದೆ ಕೆಟ್ಟ ಪರಂಪರೆಗೆ ನಾಂದಿ ಹಾಡಿದೆ ಎಂದು ಆರೋಪಿಸಿದರು.
ಇಲ್ಲಿ ಬಿಜೆಪಿ, ಕಾಂಗ್ರೆಸ್ ಪ್ರಶ್ನೆ ಬರುವುದಿಲ್ಲ. ತನಿಖೆ ರದ್ದು ಎಂದರೆ ನ್ಯಾಯಾಂಗ ವ್ಯವಸ್ಥೆ ತಿರಸ್ಕರಿಸಿದಂತೆ ಎಂದ ಅವರು, ಇದು ಆಲಿಬಾಬಾ ಔರ್ ಚಾಲೀಸ್ ಚೋರ್ ಎಂಬಂತಿದೆ. ಒಬ್ಬ ಭ್ರಷ್ಟ ಆರೋಪಿಯ ಸಮರ್ಥನೆಗೆ ಇಡೀ ಕ್ಯಾಬಿನೆಟ್ ನಿಂತದ್ದು ಕರ್ನಾಟಕದ ಘನತೆಗೆ ಕಪ್ಪು ಚುಕ್ಕಿ ಇಟ್ಟಂತೆ. ಇದು ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇಟ್ಟ ಜನರು ಮಾಡುವ ಕೆಲಸ ಅಲ್ಲ ಎಂದು ವಿಶ್ಲೇಷಿಸಿದರು.

ಮುಖ್ಯಮಂತ್ರಿ, ಚೀಫ್ ಸೆಕ್ರೆಟರಿ ಯಾರ ಮನವಿ ಮೇರೆಗೆ ಈ ವಿಷಯ ಕೈಗೆತ್ತಿಕೊಂಡಿದ್ದಾರೆ? ಇಲ್ಲಿ ಸಂವಿಧಾನ ಇದೆ. ರಾಕ್ಷಸ ನ್ಯಾಯ ಇಲ್ಲ ಎಂದು ಮನವರಿಕೆ ಮಾಡಿಕೊಳ್ಳಬೇಕಿತ್ತು. ನಮ್ಮ ಮುಖಂಡರ ಮೇಲೆ ಆರೋಪ ಬಂದಾಗ ಅವರು ನ್ಯಾಯಾಲಯದ ಮೂಲಕ ನ್ಯಾಯ ಪಡೆದರು. ಕೇಸು ಹಿಂಪಡೆಯುವ ಭಂಡತನ ಮಾಡಿಲ್ಲ. ಇದು ಆರೋಪಗಳನ್ನು ಸಾಕ್ಷೀಕರಿಸಿದಂತೆ. ನ್ಯಾಯಾಲಯದ ಮೇಲೆ ವಿಶ್ವಾಸ ಇಲ್ಲ ಎಂದು ದೃಢಪಡಿಸಿದ್ದೀರಿ. ಸರಕಾರವು ಸಂಪುಟವನ್ನು ದುರುಪಯೋಗಪಡಿಸಿದೆ ಎಂದು ಟೀಕಿಸಿದರು.
ಇವತ್ತಿನ ಡಿಸಿಎಂ 2017ರಲ್ಲಿ ರಾಜ್ಯದಲ್ಲಿ ಸಚಿವರಾಗಿದ್ದರು. ಪ್ರಾಮಾಣಿಕರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಗುತ್ತದೆಯೇ? ಆದರೆ, ಅಕ್ರಮ ಸಂಪತ್ತು ಪತ್ತೆಯಾಯಿತು. 2019ರಲ್ಲಿ ಯಡಿಯೂರಪ್ಪ ಅವರು ಇದನ್ನು ಸಿಬಿಐ ತನಿಖೆಗೆ ವಹಿಸಿದ್ದರು. ಆದಾಯದ ಮೂಲ ಇಲ್ಲದೇ 200 ಕೋಟಿಗೂ ಹೆಚ್ಚು ಸಂಪತ್ತು ಪತ್ತೆಯಾಗಿದೆ ಎಂದು ಇಡಿ
ತಿಳಿಸಿತ್ತು ಎಂದು ವಿವರಿಸಿದರು.

‘ಆಲೂ ಡಾಲ್‍ನ, ದೂಸ್ರೆ ತರಫ್‍ಸೆ ಸೋನಾ..’ ಎಂದು ರಾಹುಲ್ ಗಾಂಧಿ ಹೇಳಿದ್ದರು. ಆ ಮಾಹಿತಿಯನ್ನು ಸಿಬಿಐ ಕೇಳಿದರೆ ಹೇಳಬಹುದೆಂದು ಯೋಚಿಸಿ ಅದನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಿಬಿಐ ಪ್ರಾಥಮಿಕ ವರದಿಯನ್ನೂ ಕೊಟ್ಟಿದೆ. ಪ್ರಕರಣ ರದ್ದು ಮಾಡುವ ಅವರ ಕೇಳಿಕೆಯನ್ನು ಹೈಕೋರ್ಟ್ ತಿರಸ್ಕರಿಸಿದೆ. 3 ತಿಂಗಳಲ್ಲಿ ಸಿಬಿಐ ಅಂತಿಮ ವರದಿ ಕೊಡಬೇಕಿತ್ತು. ಜನವರಿಯಲ್ಲಿ ಅಂತಿಮ ವರದಿ ನಿರೀಕ್ಷೆ ಇರುವಾಗ ಈ ಸಂವಿಧಾನ ವಿರೋಧಿ ನಿರ್ಧಾರ ಮಾಡಿರುವುದಾಗಿ ಆಕ್ಷೇಪಿಸಿದರು.
ಹಿಂದಿನ ಕಾಂಗ್ರೆಸ್ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಚುನಾವಣೆ ಅಕ್ರಮ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದಾಗ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಅಂಥ ಕೆಟ್ಟ ಪರಂಪರೆಗೆ ರಾಜ್ಯದ ಸಚಿವಸಂಪುಟ ಮುಂದಾಗಿದೆ. ಎಲ್ಲ ಭ್ರಷ್ಟರಿಗೂ ಮಾದರಿ ಆಗುವಂಥ ನಿರ್ಧಾರ ಇದು. ಲಲ್ಲೂ ಪ್ರಸಾದ್ ಮೀರಿಸಿದ ಕೆಲಸ ಇದೆಂದು ಟೀಕಿಸಿದರು.

ಸಿಬಿಐ ತನಿಖೆ ವಿಚಾರದಲ್ಲಿ ಭಯ ಯಾಕೆ? ಸಿಬಿಐ ಸಾಕ್ಷ್ಯಾಧಾರ ಇಲ್ಲದ ವರದಿ ಕೊಟ್ಟರೆ ಅದು ನ್ಯಾಯಾಲಯದ ಎದುರು ಸಾಬೀತಾಗುತ್ತದೆಯೇ? ಬಡವರಿಗೊಂದು ನ್ಯಾಯ, ಬಲಾಢ್ಯರಿಗೊಂದು ನ್ಯಾಯವೇ? ಎಂದು ಪ್ರಶ್ನಿಸಿದರು. ಕಾಯಲು ನಿಮಗೇನು ಸಮಸ್ಯೆ ಎಂದರು. ಆ ಭಯ ಇಡೀ ಕ್ಯಾಬಿನೆಟ್ ಅನ್ನು ಕಾಡುತ್ತಿದೆಯೇ? ಎಂದರು.
ವಿಧಾನಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರು, ಚಿದಾನಂದ ಗೌಡ, ಅ. ದೇವೇಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!