ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯರಿಬ್ಬರನ್ನು ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿರುವ ಹೇಯ ಕೃತ್ಯವೊಂದು ಮಣಿಪುರದಲ್ಲಿ ನಡೆದಿದೆ. ಈ ಘಟನೆಯ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಪ್ರಧಾನಿ ಮೋದಿ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ.
ಇದೀಗ ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂಕೋರ್ಟ್ ಸಹ ಪ್ರತಿಕ್ರಿಯಿಸಿದ್ದು, ಈ ಘಟನೆ ಸಂಪೂರ್ಣ ಸಾಂವಿಧಾನಿಕ ವೈಫಲ್ಯ ಎಂದಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಕ್ರಮ ಕೈಗೊಳ್ಳಲು ಸೂಚನೆ ನೀಡಿರುವುದಲ್ಲದೆ, ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕೆಂದು ಸೂಚನೆ ನೀಡಿದ್ದಾರೆ.
ಒಂದು ವೇಳೆ ಸರ್ಕಾರವು ಕ್ರಮ ತೆಗೆದುಕೊಳ್ಳದಿದ್ದರೆ ಸುಪ್ರೀಂಕೋರ್ಟ್ ಕೈಗೆತ್ತುಕೊಳ್ಳಲಿದೆ ಎಂದು ಚಂದ್ರಚೂಡ್ ಅವರು ಎಚ್ಚರಿಕೆ ನೀಡಿದ್ದು, ಈ ಪ್ರಕರಣದ ವಿಚಾರಣೆಯನ್ನು ಜುಲೈ 28ರಂದು ಮಾಡುವುದಾಗಿ ಹೇಳಿದೆ.
ಏನಿದು ಘಟನೆ?
ನಿನ್ನೆಯಿಂದ ಟ್ವಿಟರ್ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯರಿಬ್ಬರನ್ನು ಮಣಿಪುರದಲ್ಲಿ ಪುರುಷರ ಗುಂಪೊಂದು ಬೆತ್ತಲೆಯಾಗಿ ಮೆರವಣಿಗೆ ಮಾಡಿದೆ.
ಈ ಘಟನೆ ಮೇ 4ರಂದು ಮಣಿಪುರ ರಾಜಧಾನಿ ಇಂಫಾಲ್ನಿಂದ 35 ಕಿ.ಮೀ. ದೂರದಲ್ಲಿರುವ ಕೊಂಗ್ಪೊಕ್ಪಿ ಜಿಲ್ಲೆಯಲ್ಲಿ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ಪರಿಶಿಷ್ಟ ಪಂಗಡಗಳ (ST) ಸ್ಥಾನಮಾನಕ್ಕಾಗಿ ಮೈತೀಸ್ ಸಮುದಾಯ ಇಟ್ಟಿರುವ ಬೇಡಿಕೆಯ ಕುರಿತು ಮಣಿಪುರದ ಮೈತೀಸ್ ಮತ್ತು ಕುಕಿ ಬುಡಕಟ್ಟುಗಳ ನಡುವೆ ಘರ್ಷಣೆಗಳು ಉಂಟಾಗಿರುವ ನಡುವೆಯೇ ಈ ಭಯಾನಕ ಘಟನೆಯೂ ನಡೆದಿದೆ.