ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಲಿಬಾನಿಗಳ ಆಡಳಿತದಲ್ಲಿರುವ ಅಫ್ಘಾನಿಸ್ಥಾನದ ಜನರಿಗೆ ಭಾರತದ ನೆರವು ಮುಂದುವರೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಸಂಕಷ್ಟದಲ್ಲಿರುವ ಅಫ್ಘಾನ್ ಜನರಿಗೆ ಮಾನವೀಯ ನೆರವು ನೀಡಲು ಭಾರತ ಸರ್ಕಾರ ಬದ್ಧವಾಗಿದೆ. ಅಫ್ಘಾನಿಸ್ತಾನಕ್ಕೆ ಗೋಧಿ ಪೂರೈಕೆ ಮತ್ತು ಅದರ ಸಾಗಣೆ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಭಾರತ 50 ಸಾವಿರ ಮೆಟ್ರಿಕ್ ಟನ್ ಗೋಧಿ ಕಳುಹಿಸಿಕೊಟ್ಟಿದೆ.
ಕಳೆದ ವಾರ 3.6 ಟನ್ ನಷ್ಟು ವೈದ್ಯಕೀಯ ನೆರವು ಹಾಗೂ 5 ಲಕ್ಷ ಡೋಸ್ ಗಳ ಕೋವಿಡ್ ಲಸಿಕೆ ನೀಡಲಾಗಿದೆ ಎಂದರು.
ಈತ್ತೀಚೆಗೆ ಅಫ್ಘಾನ್ ನಲ್ಲಿನ ಆರ್ಥಿಕ ಕುಸಿತ ಹಾಗೂ ಇತರೆ ಬೆಳವಣಿಗೆ ಕುರಿತು ಭಾರತ ಕಳವಳ ವ್ಯಕ್ತಪಡಿಸಿದ್ದು, ಅಫ್ಘಾನ್ ಜನರಿಗೆ ಅಗತ್ಯ ನೆರವು ನೀಡುವುದನ್ನು ಮುಂದಿನ ದಿನಗಳಲ್ಲಿ ಮುಂದುವರಿಸಲಿದೆ.