ಹೊಸದಿಗಂತ ವರದಿ ಹುಬ್ಬಳ್ಳಿ:
ಜನ ಕಲ್ಯಾಣ ಮಾಡಲಿ ಎಂದು ಕಾಂಗ್ರೆಸ್ ಗೆ ರಾಜ್ಯದ ಜನತೆ ಅಧಿಕಾರ ನೀಡಿದ್ದು, ಸರ್ಕಾರ ಅದನ್ನು ಬಿಟ್ಟು ಸಮಾವೇಶದಲ್ಲಿ ಮುಳುಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹರಿಹಾಯ್ದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯದ ಹಣವನ್ನು ದಿವಾಳಿ ಮಾಡುತ್ತಿದೆ. ರಾಜ್ಯದಲ್ಲಿ ಶ್ಯೂನ್ಯ ಸರ್ಕಾರ, ಶ್ಯೂನ್ಯ ಅಭಿವೃದ್ಧಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಶ್ಯೂನ್ಯವಾಗಿದೆ ಎಂದು ಕಿಡಿಕಾರಿದರು.
ಯಾವ ಪುರುಷಾರ್ಥಕ್ಕೆ ಹಾಸನದಲ್ಲಿ ಸರ್ಕಾರ ಸಮಾವೇಶ ಮಾಡಿದೆಯೋ ಗೊತ್ತಿಲ್ಲ. ಪ್ರತಿ ಹೆಜ್ಜೆಯಲ್ಲಿ ಹಗರಣ ನಡೆಯುತ್ತಿದೆ. ನ್ಯಾಯಾಲಯದಲ್ಲಿ ನಡೆಯುತ್ತಿರುವ ಕೇಸ್ ಮೇಲೆ ಪ್ರಭಾವ ಬೀರಲು ಸಮಾವೇಶ ಮಾಡಿದ್ದಾರೆ. ಸರ್ಕಾರಿ ದುಡ್ಡಿನಲ್ಲಿ ಸಮಾವೇಶ ಮಾಡಲಾಗಿದೆ. ಅದೇ ಹಣ ಅಭಿವೃದ್ಧಿಗೆ ಖರ್ಚು ಮಾಡಬೇಕಿತ್ತು ಎಂದು ತಿಳಿಸಿದರು.
ಸಮಾವೇಶ ಮಾಡಿ ಸರ್ಕಾರ ಆನೆ ಬಲ ತುಂಬುವುದಲ್ಲ. ಜನರಿಗೆ ಆನೆ ಬಲ ತುಂಬುವಂತಾಗಬೇಕು. ಕಾಂಗ್ರೆಸ್ ಪಕ್ಷದಲ್ಲಿ ಒಳ ಬೇಗುದಿ ಇದೆ. ಡಿಸಿಎಂ ಸಿಎಂ ಆಗಲು ತುದಿಗಾಲ ಮೇಲೆ ನಿಂತಿದ್ದಾರೆ. ಸಿಎಂ ಅವರು ಹಾಕಿಕೊಂಡ ಕುಳಿತಿದ್ದ ಫೆವಿಕೋಲ್ ಕಿತ್ತು ಕೊಳ್ಳಲು ಡಿಸಿಎಂ ಡಿ.ಕೆ. ಶಿವಕುಮಾರ ಯತ್ನ ನಡೆಸಿದ್ದಾರೆ. ಇವರಿಬ್ಬರ ಮಧ್ಯೆ ನಮ್ಮದೇನು ಪಾತ್ರ ಅಂತ ಗೃಹಸಚಿವರು ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಜಗಳ ಬರುವ ದಿನಗಳಲ್ಲಿ ದೊಡ್ಡ ಸ್ವರೂಪ ಪಡೆಯಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಸ್ಥಿರತೆ ಯಲ್ಲಿ ಕಾಲ ದೂಡುತ್ತಿದ್ದಾರೆ. ಸಿಎಂ ದೊಡ್ಡಾಟದ ಪ್ರಮುಖ ಪಾತ್ರದಾರಿ. ವಿರೋಧ ಪಕ್ಷವಾಗಿ ಸರ್ಕಾರ ತಪ್ಪುಗಳನ್ನು ಪ್ರಶ್ನಿಸುವುದು ನಮ್ಮ ಕೆಲಸ ಎಂದು ಹರಿಹಾಯ್ದರು.
ಕೇಂದ್ರದಿಂದ 10 ಕೆ.ಜಿ. ಅಕ್ಕಿ ನೀಡಿದ್ದರೆ ರಾಜಕೀಯ ನಿವೃತ್ತಿ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, 10 ಕೆ.ಜಿ. ಅಕ್ಕಿ ನೀಡಿದ್ದೇವೆ ಎಂದು ಎಲ್ಲಿಯೂ ಹೇಳಿಲ್ಲ. ರಾಜ್ಯ ಸರ್ಕಾರವೇ ನೀಡುವುದಾಗಿ ಹೇಳಿತ್ತು. ಆದರೆ ಒಂದಗಳು ಅಕ್ಕಿಯನ್ನೂ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿದೆ ಎಂದು ಹೇಳಲು ರಾಜ್ಯ ಸರ್ಕಾರಕ್ಕೆ ನಾಚಿಕೆ ಎಂದು ಕಿಡಿಕಾರಿದರು.