ಹೊಸದಿಗಂತ ವರದಿ ಕಲಬುರಗಿ :
ಪ್ರತಿವರ್ಷದಂತೆ ಈ ವರ್ಷವೂ ಹನುಮಾನ್ ಜಯಂತಿ ಪ್ರಯುಕ್ತ ಶ್ರೀ ಕೇಸರಿ ನಂದನ್ ಯುವ ಬ್ರಿಗೇಡ್ ವತಿಯಿಂದ ನಗರದಲ್ಲಿ 14 ಅಡಿ ಎತ್ತರದ ಭವ್ಯ ಹನುಮಾನ್ ಮೂರ್ತಿ ಮೆರವಣಿಗೆ (ಶೋಭಾಯಾತ್ರೆ) ಹಮ್ಮಿಕೊಳ್ಳಲಾಗಿದೆ ಎಂದು ಸುಕ್ಷೇತ್ರ ಶ್ರೀನಿವಾಸ್ ಸರಡಗಿ ಪೂಜ್ಯ ಡಾ. ಅಪ್ಪಾರಾವ ದೇವಿ ಮುತ್ಯಾ ಮಹಾರಾಜರು ತಿಳಿಸಿದರು.
ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏ.6 ರಂದು ಬೆಳಗ್ಗೆ 7 ಗಂಟೆಗೆ ನಗರದ ರಾಮತೀರ್ಥ ದೇವಾಲಯದಲ್ಲಿ ಸಾಮೂಹಿಕ ಹೋಮಹವನ ನಡೆಯಲಿದ್ದು, 11 ಗಂಟೆಗೆ 14 ಅಡಿ ಎತ್ತರದ ಶ್ರೀ ಹನುಮಾನ್ ಭವ್ಯ ಮೂರ್ತಿಯ ಮೆರವಣಿಗೆ ಆರಂಭಗೊಳ್ಳಲಿದೆ. ಮೆರವಣಿಗೆಯು ಶ್ರೀ ರಾಮತೀರ್ಥ ದೇವಸ್ಥಾನದಿಂದ ಪ್ರಾರಂಭಗೊಂಡು ಆಳಂದ ಚೆಕ್ ಪೋಸ್ಟ್, ಖಾದರಿ ಚೌಕ್, ಆಳಂದ ನಾಕಾ, ಪ್ರಕಾಶ್ ಟಾಕೀಸ್, ಸೂಪರ್ ಮಾರ್ಕೆಟ್ ರಸ್ತೆ ಮೂಲಕ ಜಗತ್ ವೃತ್ತಕ್ಕೆ ಬಂದು ಸಂಪನ್ನಗೊಳ್ಳಲಿದೆ ಎಂದು ಅವರು ಹೇಳಿದರು.
ಹನುಮಾನ್ ಮೂರ್ತಿ ಮೆರವಣಿಗೆ ವೇಳೆ ದಾರಿಯುದ್ಧಕ್ಕೂ ಡೊಳ್ಳು, ಹಲಗೆ ಸೇರಿ ಅನೇಕ ವಾದ್ಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಆದ್ದರಿಂದ ಜಿಲ್ಲೆಯ ಎಲ್ಲಾ ಹನುಮಾನ್ ಭಕ್ತರು, ಹಿಂದೂ ಭಾಂದವರು, ಮಹಿಳೆಯರು ಹಾಗೂ ಯುವಕರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಮೆರವಣಿಗೆ ಯಶಸ್ವಿಗೊಳಿಸಿ ಎಂದು ಪೂಜ್ಯ ಅಪ್ಪಾರಾವ ದೇವಿ ಮುತ್ಯಾ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೇಸರಿ ನಂದನ್ ಯುವ ಬ್ರಿಗೇಡ್ ಅಧ್ಯಕ್ಷ ಆನಂದ ಚೌವ್ಹಾಣ, ವಿಕ್ಕಿ ಎಂ ಕದಂ, ಶ್ವೇತಾ ರಾಠೋಡ್ ಸೇರಿ ಅನೇಕರು ಇದ್ದರು.