ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ತಂಡದ ಸದ್ಯಸರಾಗಿದ್ದ ಮುಂಬೈಯ ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್), ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಅವರಿಗೆ ಶುಕ್ರವಾರ ಮಹಾರಾಷ್ಟ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತಮ್ಮ ಕಚೇರಿಯಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಶುಕ್ರವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಶಿಂಧೆ ಅವರು ಮುಂಬೈ ಆಟಗಾರಿಗೆ ಗಣೇಶನ ವಿಗ್ರಹವನ್ನು ಸ್ಮರಣಿಕೆಯಾಗಿ ನೀಡಿದರು. ಬಳಿಕ ಕೆಲ ಕಾಲ ಆಟಗಾರರೊಂದಿಗೆ ಮಾತು ಕತೆ ನಡೆಸಿ ಟಿ20 ವಿಶ್ವಕಪ್ನ ಅನುಭವಗಳನ್ನು ಆಲಿಸಿದರು.
ಗುರುವಾರ ಟೀಮ್ ಇಂಡಿಯಾ ದೆಹಲಿಗೆ ಬಂದಿಳಿಯುತ್ತಿದ್ದಂತೆ ರೋಹಿತ್ ಶರ್ಮ ವಿಶ್ವಕಪ್ ಮೇಲೆತ್ತಿ ಪ್ರದರ್ಶಿಸಿದ್ದರು. ಈ ವೇಳೆ ನೆರದಿದ್ದ ಜನಸ್ತೋಮ ರೋಹಿತ್ ಪಡೆಗೆ ಜೈಕಾರ, ಡೊಳ್ಳು, ತಮಟೆ ಬಾರಿಸುವ ಮೂಲಕ ಅದ್ಧೂರಿ ಸ್ವಾಗತ ಕೋರಿತ್ತು. ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಆತಿಥ್ಯ ಸ್ವೀಕರಿಸಿ ಮಧ್ಯಾಹ್ನ 3.42ಕ್ಕೆ ತಂಡ ಮುಂಬೈಗೆ ಪ್ರಯಾಣ ಬೆಳೆಸಿತ್ತು. ಸಂಜೆ ಐದು ಗಂಟೆಯ ಮುಂಬೈ ತಲುಪಿದ ತಂಡಕ್ಕೆ ಭರ್ಜರಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾಗರೋಪಾದಿಯಲ್ಲಿ ಸೇರಿದ್ದ ಅಭಿಮಾನಿಗಳ ಗುಂಪಿನಲ್ಲಿ ಆಟಗಾರರು ತೆರೆದ ಬಸ್ನಲ್ಲಿ ವಿಶ್ವಕಪ್ ಟ್ರೋಫಿಯೊಂದಿಗೆ ರೋಡ್ ಶೋ ನಡೆಸಿದ್ದರು. ದಕ್ಷಿಣ ಮುಂಬೈನ ಮರೀನ್ ಡ್ರೈವ್ ಪ್ರದೇಶ ಸಾವಿರಾರು ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ತುಂಬಿ ಹೋಗಿತ್ತು.