ಸಹಾರಾ ಇಂಡಿಯಾ ಪರಿವಾರ್‌ ಗೆ ಉತ್ತಮ ಸ್ಪಂದನೆ: ಪೋರ್ಟಲ್‌ನಲ್ಲಿ ಈವರೆಗೂ 7 ಲಕ್ಷ ಅರ್ಜಿ, 158 ಕೋಟಿಗೆ ಕ್ಲೇಮ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿವಿಧ ಹಗರಣದ ಮೂಲದ ಮೋಸ ಹೋದವರಿಗೆ ಹಣವನ್ನು ರೀಫಂಡ್‌ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ಜಾರಿಗೆ ತಂದಿರುವ ಸಹಾರಾ ಇಂಡಿಯಾ ಪರಿವಾರ್‌ ಗೆ ಉತ್ತಮ ಸ್ಪಂದನೆ ಸಿಗುತ್ತಿದೆ.

ಜುಲೈ 18 ರಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ ಸಿಆರ್‌ಸಿಎಸ್‌ ಸಹಾರಾ ರೀಫಂಡ್‌ ಪೋರ್ಟಲ್‌ ಅನ್ನು ಅನಾವರಣ ಮಾಡಿದ್ದರು. ಇಲ್ಲಿಯವರೆಗೂ ಸಹಾರಾ ಕೋ ಆಪರೇಟಿವ್‌ ಸೊಸೈಟಿಯಲ್ಲಿ ಹೂಡಿಕೆ ಮಾಡಿದ 7 ಲಕ್ಷ ಹೂಡಿಕೆದಾರರು ಅರ್ಜಿ ಸಲ್ಲಿಕೆ ಮಾಡಿದ್ದು, 158 ಕೋಟಿಯಷ್ಟು ಕ್ಲೇಮ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಪೋರ್ಟಲ್ ಮೂಲಕ, ಗುಂಪಿನ 4 ಸೊಸೈಟಿಗಳಲ್ಲಿ ಸಿಲುಕಿರುವ ಸಹಾರಾದ 10 ಕೋಟಿ ಹೂಡಿಕೆದಾರರಿಗೆ 5,000 ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡುವ ಬಗ್ಗೆ ಆರಂಭದಲ್ಲಿ ನಿರ್ಧಾರ ಮಾಡಲಾಗುತ್ತದೆ. ಈ ಸೊಸೈಟಿಗಳು ಹೂಡಿಕೆದಾರರಿಂದ ಬರೋಬ್ಬರಿ 86,000 ಕೋಟಿ ರೂಪಾಯಿಯನ್ನು ಸಂಗ್ರಹ ಮಾಡಿದ್ದವು.

ಸಿಆರ್‌ಸಿಎಸ್ ಪೋರ್ಟಲ್ ಬಿಡುಗಡೆಯ ಸಂದರ್ಭ ಸಹಾರಾ ಹೂಡಿಕೆದಾರರು ಈ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದ ನಂತರ 45 ದಿನಗಳಲ್ಲಿ ತಮ್ಮ ಹಣವನ್ನು ಮರಳಿ ಪಡೆಯುತ್ತಾರೆ ಎಂದು ಅಮಿತ್‌ ಶಾ ಹೇಳಿದ್ದರು. ಈ ಹಣವನ್ನು ನೇರವಾಗಿ ಖಾತೆಗೆ ವರ್ಗಾಯಿಸಲಾಗುತ್ತದೆ. ಸಹಾರಾದ 4 ಸಹಕಾರ ಸಂಘಗಳ ಹೂಡಿಕೆದಾರರು ಮಾತ್ರ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶದಂತಹ ರಾಜ್ಯಗಳು ಅತಿ ಹೆಚ್ಚು ಹೂಡಿಕೆದಾರರನ್ನು ಹೊಂದಿವೆ ಎಂದು ತಿಳಿಸಲಾಗಿದೆ.

ಮೊದಲ ಹಂತದಲ್ಲಿ ಠೇವಣಿದಾರರು 10,000 ರೂಪಾಯಿವರೆಗಿನ ಹಣವನ್ನು ಮಾತ್ರ ಮರುಪಾವತಿ ಪಡೆಯುತ್ತಾರೆ. ಅಂದರೆ, ಠೇವಣಿ ಮೊತ್ತ 20,000 ರೂ.ಗಳಿದ್ದರೂ ಕೇವಲ 10,000 ರೂಪಾಯಿ ಮಾತ್ರವೇ ಅವರಿಗೆ ಸಿಗಲಿದೆ. ಇನ್ನು ಈ ಸೊಸೈಟಿಯಲ್ಲಿ 10 ಸಾವಿರ ರೂಪಾಯಿವರೆಗೆ ಹೂಡಿಕೆ ಮಾಡಿದ 1.07 ಕೋಟಿ ಹೂಡಿಕೆದಾರರಿದ್ದು, ಅವರಿಗೆ ಪೂರ್ಣ ಹಣ ಮರುಪಾವತಿಯಾಗಲಿದೆ.

ಸಹಾರಾ ಇಂಡಿಯಾ ಪರಿವಾರ್‌ನ ನಾಲ್ಕು ಸೊಸೈಟಿಗಳ ಪೈಕಿ ಮೂರು ಸೊಸೈಟಿಗಳಾದ ಸಹಾರಾ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಲಿಮಿಟೆಡ್‌, ಹಮಾರಾ ಇಂಡಿಯಾ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಲಿಮಿಟೆಡ್‌, ಸಹಾರಯಾನ ಯೂನಿವರ್ಸಲ್‌ ಮಲ್ಟಿಪರ್ಪಸ್‌ ಸೊಸೈಟಿ ಲಿಮಿಟೆಡ್‌ನಲ್ಲಿ 2022ರ ಮಾರ್ಚ್‌ 22ಕ್ಕೂ ಮುನ್ನ ಹೂಡಿಕೆ ಮಾಡಿದವರು ರೀಫಂಡ್‌ಗೆ ಅರ್ಹರಾಗಿರುತ್ತಾರೆ. ಸ್ಟಾರ್ಸ್‌ ಮಲ್ಟಿಪರ್ಪಸ್‌ ಕೋ ಆಪರೇಟಿವ್‌ ಸೊಸೈಟಿ ಲಿಮಿಟೆಡ್‌ ಹೈದರಾಬಾದ್‌ನಲ್ಲಿ 2023ರ ಮಾರ್ಚ್‌ 29ಕ್ಕೂ ಮುನ್ನ ಹೂಡಿಕೆ ಮಾಡಿದವರು ರೀಫಂಡ್‌ಗೆ ಅರ್ಹರಾಗಿರುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!