ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಅಮೆರಿಕದ ತೀರ್ಮಾನಕ್ಕೆ ಬೆಂಬಲ ನೀಡದ ರಾಷ್ಟ್ರಗಳ ಮೇಲೆ ವ್ಯಾಪಾರ ಸುಂಕಗಳನ್ನು ವಿಧಿಸುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟ ಸಂದೇಶ ನೀಡಿದ್ದಾರೆ. ಈ ಹೇಳಿಕೆ ಯುರೋಪ್ ರಾಷ್ಟ್ರಗಳ ನಡುವೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಗ್ರೀನ್‌ಲ್ಯಾಂಡ್ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ತಂತ್ರಾತ್ಮಕವಾಗಿ ಅತ್ಯಂತ ಪ್ರಮುಖವಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಈ ವಿಷಯದಲ್ಲಿ ಅಮೆರಿಕದ ನಿಲುವನ್ನು ಒಪ್ಪಿಕೊಳ್ಳದ ರಾಷ್ಟ್ರಗಳು ವ್ಯಾಪಾರಿಕ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಗ್ರೀನ್‌ಲ್ಯಾಂಡ್‌ನ್ನು ಮಿಲಿಟರಿ ಬಲ ಬಳಸಿ ವಶಪಡಿಸಿಕೊಳ್ಳುವ ಸಾಧ್ಯತೆಯ ಮಾತುಗಳನ್ನೂ ಟ್ರಂಪ್ ಹೇಳಿದ್ದರು.
ಈ ಹೇಳಿಕೆಗಳ ನಂತರ ಡೆನ್ಮಾರ್ಕ್ ಸರ್ಕಾರ ಗ್ರೀನ್‌ಲ್ಯಾಂಡ್‌ಗೆ ತನ್ನ ಸೇನಾ ಪಡೆಗಳನ್ನು ಕಳುಹಿಸಿದ್ದು, ಭದ್ರತೆ ಹೆಚ್ಚಿಸುವ ಕ್ರಮ ಕೈಗೊಂಡಿದೆ. ಆದರೆ ರಷ್ಯಾ ಮತ್ತು ಚೀನಾದಂತಹ ಶಕ್ತಿಶಾಲಿ ರಾಷ್ಟ್ರಗಳ ಎದುರು ಡೆನ್ಮಾರ್ಕ್ ಒಬ್ಬಂಟಿಯಾಗಿ ಗ್ರೀನ್‌ಲ್ಯಾಂಡ್‌ಗೆ ಭದ್ರತೆ ನೀಡಲು ಸಾಧ್ಯವಿಲ್ಲ. ಅಮೆರಿಕದ ರಕ್ಷಣೆಯೇ ಗ್ರೀನ್‌ಲ್ಯಾಂಡ್‌ಗೆ ಅಗತ್ಯ ಎಂದು ಟ್ರಂಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ನೇತೃತ್ವದಲ್ಲಿರುವ ನ್ಯಾಟೋ ಒಕ್ಕೂಟದಲ್ಲಿ ಡೆನ್ಮಾರ್ಕ್ ಸೇರಿದಂತೆ ಯುರೋಪಿನ 23 ರಾಷ್ಟ್ರಗಳು ಸದಸ್ಯರಾಗಿವೆ. ಆದರೂ ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಅಮೆರಿಕದ ಧೋರಣೆಗೆ ಯುರೋಪಿನ ಕೆಲವು ದೇಶಗಳು ವಿರೋಧ ವ್ಯಕ್ತಪಡಿಸುತ್ತಿವೆ. ಈ ಬೆಳವಣಿಗೆಗಳು ಅಮೆರಿಕ–ಯುರೋಪ್ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಹೊಸ ಒತ್ತಡಕ್ಕೆ ಕಾರಣವಾಗುವ ಸಾಧ್ಯತೆ ಇದೆ.


