ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರೀನ್‌ಲ್ಯಾಂಡ್‌ನ್ನು ತನ್ನ ಪ್ರಭಾವಕ್ಕೆ ತರಲು ಅಮೆರಿಕ ಮುಂದಾಗಿರುವ ಕ್ರಮಕ್ಕೆ ಯುರೋಪಿಯನ್ ರಾಷ್ಟ್ರಗಳು ತೀವ್ರ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವ್ಯಾಪಾರ ಒತ್ತಡಕ್ಕೆ ಮೊರೆ ಹೋಗಿದ್ದಾರೆ. ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಸಹಕಾರ ನೀಡದ ಯುರೋಪಿಯನ್ ದೇಶಗಳ ಮೇಲೆ ಶೇ.10 ವ್ಯಾಪಾರ ಸುಂಕ ವಿಧಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.
ಡೆನ್ಮಾರ್ಕ್, ಯುನೈಟೆಡ್ ಕಿಂಗ್‌ಡಂ, ಫ್ರಾನ್ಸ್ ಸೇರಿದಂತೆ ಯುರೋಪಿಯನ್ ಒಕ್ಕೂಟದ ಹಲವು ರಾಷ್ಟ್ರಗಳು ಫೆಬ್ರವರಿ 1ರಿಂದ ಈ ಸುಂಕದ ಪರಿಣಾಮ ಎದುರಿಸಬೇಕಾಗುತ್ತದೆ. ಟ್ರೂತ್ ಸೋಶಿಯಲ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಟ್ರಂಪ್, ಅಮೆರಿಕದೊಂದಿಗೆ ಗ್ರೀನ್‌ಲ್ಯಾಂಡ್ ಖರೀದಿ ಸಂಬಂಧಿತ ಒಪ್ಪಂದಕ್ಕೆ ಬರದಿದ್ದರೆ ಜೂನ್ 1ರಿಂದ ಸುಂಕವನ್ನು ಶೇ.25ಕ್ಕೆ ಏರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಅಮೆರಿಕದ ನಿಲುವಿಗೆ ಬೆಂಬಲ ನೀಡದ ರಾಷ್ಟ್ರಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಹೇಳಿದ್ದರು. ಅದರ ಮುಂದುವರಿದ ಭಾಗವಾಗಿಯೇ ಈ ನಿರ್ಧಾರವನ್ನು ನೋಡಲಾಗುತ್ತಿದೆ. ಆದರೆ ಭೂಪ್ರದೇಶದ ಭವಿಷ್ಯದ ಕುರಿತು ನಿರ್ಧಾರ ತೆಗೆದುಕೊಳ್ಳುವ ಹಕ್ಕು ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ಗೆ ಮಾತ್ರ ಸೇರಿದೆ ಎಂದು ಯುರೋಪಿಯನ್ ನಾಯಕರು ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮಧ್ಯೆ ಡೆನ್ಮಾರ್ಕ್, ಮಿತ್ರರಾಷ್ಟ್ರಗಳ ಸಹಕಾರದೊಂದಿಗೆ ಗ್ರೀನ್‌ಲ್ಯಾಂಡ್‌ನಲ್ಲಿ ತನ್ನ ಸೇನಾ ಹಾಜರಾತಿಯನ್ನು ಹೆಚ್ಚಿಸುತ್ತಿರುವುದಾಗಿ ಘೋಷಿಸಿದೆ. ಖನಿಜ ಸಂಪತ್ತಿನಿಂದ ಸಮೃದ್ಧವಾಗಿರುವ ಗ್ರೀನ್‌ಲ್ಯಾಂಡ್ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಅಗತ್ಯವೆಂದು ಟ್ರಂಪ್ ಸಮರ್ಥಿಸಿಕೊಂಡಿದ್ದು, ಚೀನಾ ಮತ್ತು ರಷ್ಯಾ ಪ್ರಭಾವ ತಡೆಯುವುದೇ ಈ ತಂತ್ರದ ಉದ್ದೇಶ ಎಂದು ಹೇಳಿದ್ದಾರೆ.


