ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಲಕ್ಷ್ಮೀ ಯೋಜನೆ ಮನೆಯ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2,000 ನೀಡುವುದಾಗಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಈ ಹಣವನ್ನು ಅತ್ತೆಗೆ ಮಾತ್ರ ನೀಡಲಾಗುತ್ತದೆ ಎಂಬುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದರು.
ಈ ಕುರಿತು ಇಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ಅತ್ತೆಯೇ ಮನೆಗೆ ಯಜಮಾನಿ ಎಂದಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆಯನ್ನು ನಿರಾಕರಿಸಿದ್ದಾರೆ.
ಮನೆಯ ಯಜಮಾನಿ ಯಾರು ಅಂತ ನಾವು ನಿರ್ಧಾರ ಮಾಡಲು ಸಾಧ್ಯವಿಲ್ಲ. ಮನೆಯವರು ಈ ಬಗ್ಗೆ ನಿರ್ಧರಿಸುತ್ತಾರೆಈ ಬಗ್ಗೆ ಯಾವುದೇ ಮಂತ್ರಿಗಳು ಮಾತನಾಡಿ ಗೊಂದಲ ಮೂಡಿಸದಂತೆ ಸೂಚಿಸಲಾಗಿದೆ ಎಂದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ನಿನ್ನೆ ಮಾತನಾಡಿದ್ದ ಮಹಿಳಾ, ಮಕ್ಕಳ ಮತ್ತು ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹ ಲಕ್ಷ್ಮೀ ಯೋಜನೆಯ ಹಣ ಅತ್ತೆಗೆ ಸಿಗಲಿದೆ. ನಮ್ಮ ಸಂಪ್ರದಾಯದ ಪ್ರಕಾರ ಮನೆಯ ಒಡತಿ ಅತ್ತೆ ಆಗುತ್ತದೆ. ಹೀಗಾಗಿ ಗೃಹ ಲಕ್ಷ್ಮೀ ಯೋಜನೆಯ ಹಣವನ್ನು ಅತ್ತೆಗೆ ನೀಡುತ್ತೇವೆ ಎಂದಿದ್ದರು. ಅತ್ತೆ ಪ್ರೀತಿಯಿಂದ ಬೇಕಾದರೆ ಸೊಸೆಗೆ ಯೋಜನೆಯ ಹಣ ನೀಡಲಿ. ನಾಳೆ ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದೆ. ಆ ಸಭೆಯ ಬಳಿಕ ಗೃಹಲಕ್ಷ್ಮೀ ಯೋಜನೆಯ ಜಾರಿಗೆ ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದ್ದರು.