ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಗಳಲ್ಲಿ ಒಂದಾದ ಮನೆ ಯಜಮಾನಿಗೆ 2000 ರೂ. ಹಣ ನೀಡುವ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರಕಾರ ಸಜ್ಜಾಗಿದ್ದು, ನಾಳೆ ಸಂಜೆ 5ಕ್ಕೆ ಗೃಹಲಕ್ಷ್ಮೀ ಯೋಜನೆಗೆ(Gruha Lakshmi scheme )ಅಧಿಕೃತವಾಗಿ ಚಾಲನೆ ಸಿಗಲಿದೆ.
ಈ ಕುರಿತು ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar), ಗೃಹಲಕ್ಷ್ಮೀ ಯೋಜನೆಗೆ ನಾಳೆ (ಜುಲೈ 19) ಸಿಎಂ ಸಿದ್ದರಾಮಯ್ಯ(Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಅವರು ವಿಧಾನಸೌಧದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಧಿಕಾರಿಗಳು, ಸಿಬ್ಬಂದಿಗೆ ತಳ ಹಂತದಿಂದ ತರಬೇತಿ ಕೊಟ್ಟಿದ್ದೇವೆ. ನಾಡಕಚೇರಿ, ಗ್ರಾಮ ಒನ್, ಬೆಂಗಳೂರು ಒನ್ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ. ಮನೆ ಯಜಮಾನಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಪತಿಯ ಆಧಾರ್ ಕಾರ್ಡ್ ಕೂಡ ಬೇಕಾಗುತ್ತೆ. ಆಧಾರ್ ಜತೆಗೆ ಮೊಬೈಲ್ ಕೊಂಡೊಯ್ದರೆ ಸಾಕು, ಬೇರೇನೂ ಬೇಡ ಎಂದರು.
ಬೇರೆ ಖಾತೆಗೆ ಹಣ ಹಾಕಿ ಎನ್ನುವವರು ಪಾಸ್ಬುಕ್ ಜೆರಾಕ್ಸ್ ಕೊಡಬೇಕು. ಯೋಜನೆಯ ಉಚಿತ ಲಾಭ ಪಡೆದುಕೊಳ್ಳಲು ಸಹಾಯವಾಣಿ 8147500500 ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು SMS ಮಾಡಿ. ಕೂಡಲೇ ಸ್ಥಳ, ಗೊತ್ತುಪಡಿಸಿದ ದಿನಾಂಕ, ಸಮಯ ಸಂದೇಶ ಹೋಗುತ್ತೆ. ಯಾವುದೇ ಮಧ್ಯವರ್ತಿಗಳ ಮೊರೆ ಹೋಗುವ ಅಗತ್ಯವಿಲ್ಲ. ಗೊಂದಲವಿದ್ದರೆ 1902 ನಂಬರ್ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ ಎಂದು ಮಾಹಿತಿ ನೀಡಿದರು.
ಗೃಹಲಕ್ಷ್ಮೀ ಯೋಜನೆ ಬಗ್ಗೆ ಯಾವುದೇ ರೀತಿಯ ಗೊಂದಲವಿಲ್ಲ. ಮನೆ ಯಜಮಾನಿ ಯಾರೆಂದು ಕುಟುಂಬದವರೇ ನಿರ್ಧರಿಸುತ್ತಾರೆ. ಗೃಹಲಕ್ಷ್ಮೀ ಯೋಜನೆಯಿಂದ 1.28 ಕೋಟಿ ಕುಟುಂಬಕ್ಕೆ ಲಾಭವಾಗಿತ್ತೆ. ಈ ಯೋಜನೆಗೆ ಬಜೆಟ್ನಲ್ಲಿ 17,500 ಕೋಟಿ ರೂ. ಹಾಕಿದ್ದೇವೆ. ಆಗಸ್ಟ್ನಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಹಾಕುತ್ತೇವೆ ಎಂದು ತಿಳಿಸಿದರು.
1 ಕೋಟಿ 11 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಮೊಬೈಲ್ ಸಂಖ್ಯೆ ಆಧಾರ್ ಹಾಗೂ ಬ್ಯಾಂಕ್ ಗೆ ಲಿಂಕ್ ಆಗಿದೆ. ಒಂದು ದಿನ ಒಂದು ಕೇಂದ್ರದಲ್ಲಿ 60 ಜನ ಅರ್ಜಿಯನ್ನ ಹಾಕಬಹುದು. ಗೊಂದಲ ಆಗಬಾರದು ಅಂತ 60 ಮಂದಿಗೆ ಮಾತ್ರ ಸೀಮಿತಗೊಳಿಸಿದ್ದೇವೆ. ಸುಮಾರು 11 ಸಾವಿರ ಸೇವಾ ಕೇಂದ್ರಗಳು ರಾಜ್ಯದಲ್ಲಿದ್ದು, ಒಂದು ದಿನಕ್ಕೆ 60 ಅಂದರೆ ಒಟ್ಟಾರೆ 6.5 ಲಕ್ಷ ಜನರು ಈ ಸೇವೆಯನ್ನ ಪಡೆದುಕೊಳ್ಳುತ್ತಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.