ಹಾಡಹಗಲಲ್ಲೇ ದರೋಡೆ: ಸಿನಿಮೀಯ ರೀತಿಯಲ್ಲಿ ಕಾರು ಅಡ್ಡಗಟ್ಟಿ ಬ್ಯಾಗ್ ದೋಚಿದ ಖದೀಮರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾಡಹಗಲೇ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದೆ. ಇಂಡಿಯಾ ಗೇಟ್‌ನಿಂದ ರಿಂಗ್ ರೋಡ್‌ಗೆ ಸಂಪರ್ಕ ಕಲ್ಪಿಸುವ ಪ್ರಗತಿ ಮೈದಾನದ ಸುರಂಗ ಮಾರ್ಗದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗನ್ ತೋರಿಸಿ ಕಾರಿನಲ್ಲಿದ್ದ ಡೆಲಿವರಿ ಏಜೆಂಟ್‌ನ ಬ್ಯಾಗ್ ದೋಚಿ ಪರಾರಿಯಾಗಿದ್ದಾರೆ.

ಪಟೇಲ್ ಸಜನ್ ಕುಮಾರ್ ಹಣ ಕಳೆದುಕೊಂಡ ವ್ಯಕ್ತಿ. ಅವರು ಚಾಂದಿನಿ ಚೌಕ್‌ನಲ್ಲಿರುವ ಓಮಿಯಾ ಎಂಟರ್‌ಪ್ರೈಸಸ್‌ನಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಿ. ತನ್ನ ಸ್ನೇಹಿತ ಜಿಗರ್ ಪಟೇಲ್ ಜೊತೆ ಸೇರಿ ಶನಿವಾರ ಸಂಜೆ ಗುರುಗ್ರಾಮಕ್ಕೆ 2 ಲಕ್ಷ ರೂ. ನೀಡಲು ತೆರಳುತ್ತಿದ್ದರು.

ರಿಂಗ್ ರಸ್ತೆಯಿಂದ ಪ್ರಗತಿ ಮೈದಾನದ ಸುರಂಗ ಮಾರ್ಗ ಪ್ರವೇಶಿಸಿ ಸ್ವಲ್ಪ ದೂರ ಸಾಗುವ ವೇಳೆ 2 ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಗನ್ ತೋರಿಸಿ ಬಲವಂತವಾಗಿ ಕ್ಯಾಬ್ ತಡೆದಿದ್ದಾರೆ. ಬಳಿಕ ದುಷ್ಕರ್ಮಿಗಳು ನಗದು ತುಂಬಿದ್ದ ಬ್ಯಾಗ್ ಅನ್ನು ದೋಚಿ ಪರಾರಿಯಾಗಿದ್ದಾರೆ.

ಪಟೇಲ್ ಸಜನ್ ಕುಮಾರ್ ದೂರಿನ ಮೇರೆಗೆ ತಿಲಕ್ ಮಾರ್ಗ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಿಎಂ ಕೇಜ್ರಿವಾಲ್ ಕಿಡಿ:

ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಕಿಡಿಕಾರಿದ್ದಾರೆ. ನಗರದಲ್ಲಿ ಭದ್ರತೆ ಇಲ್ಲವಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಲೆಫ್ಟಿನೆಂಟ್​ ಗವರ್ನರ್​ ವಿಫಲರಾಗಿದ್ದಾರೆ. ಹಾಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ದೆಹಲಿಯನ್ನು ಸುರಕ್ಷಿತವಾಗಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ಅದನ್ನು ನಮಗೆ ಒಪ್ಪಿಸಿ. ನಾಗರಿಕರ ಸುರಕ್ಷತೆಯನ್ನು ಹೇಗೆ ಮಾಡಬೇಕು ಎಂಬುದನ್ನು ನಾವು ನಿಮಗೆ ತೋರಿಸುತ್ತೇವೆ ಎಂದು ಟ್ವೀಟ್​ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!