ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 50ನೇ ಸಭೆಯಲ್ಲಿ (GST Council Meeting) ಇಂದು ಮಹತ್ವದ ಕ್ರಮ ಕೈಗೊಂಡಿದ್ದು, ಹಲವು ವಸ್ತುಗಳ ತೆರಿಗೆಯಲ್ಲಿ ಭಾರಿ ಇಳಿಕೆ ಮಾಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಬೇಯಿಸದ, ಎಣ್ಣೆಯಲ್ಲಿ ಕರಿಯದ ಸ್ನ್ಯಾಕ್ಸ್ ಪೊಟ್ಟಣದ (Uncooked/Unfried Extruded Snack Pallets) ಮೇಲಿನ ತೆರಿಗೆಯ ಸ್ಲ್ಯಾಬ್ ಅನ್ನು ಶೇ 18ರಿಂದ ಶೇ 5ಕ್ಕೆ ಇಳಿಕೆ ಮಾಡಲಾಗಿದೆ.
ಕ್ಯಾನ್ಸರ್ ಔಷಧಕ್ಕೆ (Cancer Drug) ಜಿಎಸ್ಟಿ ವಿನಾಯಿತಿ ಘೋಷಿಸಲಾಗಿದೆ.
ಮೀನಿನ ಎಣ್ಣೆಯಿಂದ ತಯಾರಿಸಿದ ಪೇಸ್ಟ್, ಇಮಿಟೇಷನ್ ಝರಿ ಥ್ರೆಡ್ಸ್ ಮೇಲಿನ ಜಿಎಸ್ಟಿ ಸ್ಲ್ಯಾಬ್ ಅನ್ನೂ ಶೇ 18ರಿಂದ ಶೇ 5ಕ್ಕೆ ಇಳಿಕೆ ಮಾಡಲಾಗಿದೆ. ಆನ್ಲೈನ್ ಗೇಮಿಂಗ್, ಕುದುರೆ ರೇಸ್ ಹಾಗೂ ಕ್ಯಾಸಿನೋಗಳ ಮೇಲಿನ ತೆರಿಗೆಯ ಸ್ಲ್ಯಾಬ್ ಅನ್ನು ಶೇ 28ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಖಾಸಗಿ ಸಂಸ್ಥೆಗಳ ಉಪಗ್ರಹ ಉಡಾವಣಾ ಸೇವೆಗಳಿಗೂ ಜಿಎಸ್ಟಿ ತೆರಿಗೆ ವಿನಾಯಿತಿ ನೀಡಲಾಗಿದೆ. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿನ ಚಟುವಟಿಕೆಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.
ಸಿನಿಮಾ ಥಿಯೇಟರ್ಗಳಲ್ಲಿ ಮಾರಾಟ ಮಾಡಲಾಗುವ ಆಹಾರ, ಪಾನೀಯಗಳ ಮೇಲೆ ಶೇ 18ರ ಜಿಎಸ್ಟಿ ವಿಧಿಸಲಾಗುತ್ತಿಲ್ಲ. ಶೇ 5ರಷ್ಟು ಮಾತ್ರವೇ ಜಿಎಸ್ಟಿ ವಿಧಿಸಲಾಗುತ್ತಿದೆ ಎಂದು ಆದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಸ್ಪಷ್ಟನೆ ನೀಡಿದರು.
ಜಿಎಸ್ಟಿ ಮಂಡಳಿ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಹಣಕಾಸು ಅಕ್ರಮ ವರ್ಗಾವಣೆ ತಡೆ ಕಾಯ್ದೆಗೂ (PMLA) ಜಿಎಸ್ಟಿ ನಿಯಮಕ್ಕೂ ಸಂಬಂಧವಿಲ್ಲ. ಜಿಎಸ್ಟಿಎನ್ ಮಾಹಿತಿಯನ್ನು ಪಿಎಂಎಲ್ಎ ಅಡಿ ತರುವ ಅಧಿಸೂಚನೆ ತನಿಖಾ ಸಂಸ್ಥೆಗಳನ್ನು ಬಲಪಡಿಸುವ ಕ್ರಮವಷ್ಟೇ. ತನಿಖಾ ಸಂಸ್ಥೆಗಳಿಗೆ ತೆರಿಗೆ ವಂಚನೆಯ ಮಾಹಿತಿ ಈ ಹಿಂದೆ ದೊರೆಯುತ್ತಿರಲಿಲ್ಲ ಎಂದು ತಿಳಿಸಿದರು.