ಹೊಸದಿಗಂತ ಡಿಜಿಟಲ್ ಡೆಸ್ಕ್ :
ಪಂಜಾಬ್ ಬಳಿ ಸಂಭವಿಸಿದ್ದ ಗೂಡ್ಸ್ ರೈಲು ಡಿಕ್ಕಿ ಪ್ರಕರಣದಲ್ಲಿ ಲೋಕೊ ಪೈಲೆಟ್ ಹಾಗೂ ಸಹಾಯಕ ಇಬ್ಬರೂ ನಿದ್ರೆಗೆ ಜಾರಿದ್ದರಿಂದ ಕೆಂಪು ದೀಪ ಮೂಡಿದಾಗ ಬ್ರೇಕ್ ಹಾಕದ ಕಾರಣ ಅಪಘಾತ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 2ರಂದು 3.15ರ ಹೊತ್ತಿಗೆ ಪಂಜಾಬ್‌ನ ಸಾಧೂಗಡ್ ರೈಲ್ವೆ ನಿಲ್ದಾಣದ ಬಳಿಯ ಸಿರ್‌ಹಿಂದ್ ಜಂಕ್ಷನ್‌ನಲ್ಲಿ ಜಿವಿಜಿಎನ್ ಗೂಡ್ಸ್ ರೈಲು ಹಳಿ ತಪ್ಪಿ, ಪಕ್ಕದ ಪ್ರಯಾಣಿಕ ರೈಲು ಮಾರ್ಗದ ಮೇಲೆ ಬಿದ್ದಿತ್ತು.ಇದೇ ಸಮಯದಲ್ಲಿ ಜಮ್ಮು ತವಿ ಬೇಸಿಗೆ ವಿಶೇಷ ರೈಲು ಇದೇ ಜಂಕ್ಷನ್‌ನಲ್ಲಿ ಹಳಿ ಬದಲಿಸುತ್ತಿತ್ತು. ಬಿದ್ದ ಗೂಡ್ಸ್ ರೈಲಿನ ಎಂಜಿನ್‌ಗೆ ಡಿಕ್ಕಿಯಾದ ಪರಿಣಾಮ ಪ್ರಯಾಣಿಕರಿದ್ದ ರೈಲು ಕೂಡಾ ಹಳಿ ತಪ್ಪಿತ್ತು ಎಂದು ಇದರ ತನಿಖಾ ವರದಿ ಹೇಳಿದೆ.
ಈ ಕ್ರಾಸಿಂಗ್‌ನಲ್ಲಿ ನೂರಾರು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಜಮ್ಮು ತಾವಿ ಬೇಸಿಗೆ ವಿಶೇಷ ರೈಲು ಹಳದಿ ದೀಪ ಉರಿಯುತ್ತಿದ್ದುದರಿಂದ ಪ್ರತಿ ಗಂಟೆಗೆ 46 ಕಿ.ಮೀ.ರಷ್ಟು ಕಡಿಮೆ ವೇಗದಲ್ಲಿ ಸಾಗುತ್ತಿತ್ತು. ರೈಲ್ವೆಯಲ್ಲಿ ಹಳದಿ ಬಣ್ಣದ ದೀಪ ಉರಿಯುತ್ತಿದೆ ಎಂದರೆ ಮುಂದೆ ಕೆಂಪು ದೀಪ ಹೊತ್ತಿಕೊಳ್ಳಲಿದೆ ಹಾಗೂ ರೈಲಿನ ವೇಗವನ್ನು ತಗ್ಗಿಸಬೇಕು ಎಂಬುದು ಲೊಕೊ ಪೈಲೆಟ್‌ಗೆ ನೀಡುವ ಸಂದೇಶವಾಗಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.
ಅಪಘಾತ ಸಂಭವಿಸಿದಾಗ ಜಿವಿಜಿಎನ್ ರೈಲಿನ ಲೊಕೊ ಪೈಲೆಟ್ ಹಾಗೂ ಸಹಾಯಕ ಲೊಕೊ ಪೈಲೆಟ್ ಇಬ್ಬರೂ ಬಿದ್ದ ರೈಲಿನ ಎಂಜಿನ್ ಕೋಣೆಯಲ್ಲಿ ಸಿಲುಕಿದ್ದರು. ಸ್ಥಳದಲ್ಲೇ ಇದ್ದ ರೈಲ್ವೆ ಸಿಬ್ಬಂದಿ ಇವರನ್ನು ಗಾಜು ಒಡೆದು ರಕ್ಷಿಸಿದ್ದರು. ಗಾಯಗಳಾಗಿದ್ದ ಇವರಿಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿರಲಿಲ್ಲ ಎಂದು ಹೇಳಲಾಗಿದೆ.
ಇಬ್ಬರೂ ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಈ ಇಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡಿಲ್ಲ ಎಂದು ತನಿಖಾ ವರದಿ ಹೇಳಿದೆ. ಆದರೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತಾವು ನಿದ್ರೆಗೆ ಜಾರಿದ್ದಾಗಿ, ರೈಲಿನ ವ್ಯವಸ್ಥಾಪಕರಿಗೆ ಈ ಇಬ್ಬರು ಲಿಖಿತ ಹೇಳಿಕೆ ನೀಡಿದ್ದಾರೆ ಎಂದು ವರದಿ ಹೇಳಿದೆ.
ಸಂಪೂರ್ಣ ವಿಶ್ರಾಂತಿ ನಂತರವೇ ಲೊಕೊ ಪೈಲೆಟ್ ಮತ್ತು ಸಹಾಯಕ ಲೊಕೊ ಪೈಲೆಟ್ ಕರ್ತವ್ಯ ಆರಂಭಿಸಿದ್ದರು. ಹೀಗಾಗಿ ಅವರು ಚಾಲನೆ ಸಂದರ್ಭದಲ್ಲಿ ಎಚ್ಚರ ಇರಬೇಕಿತ್ತು. ಜತೆಗೆ ಅಪಘಾತವನ್ನು ತಪ್ಪಿಸುವ ಅವಕಾಶವೂ ಇತ್ತುಎಂದು ರೈಲಿನ ವ್ಯವಸ್ಥಾಪಕ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದಾರೆ.
ರೈಲಿನ ಚಾಲಕರ ಕೊರತೆಯಿಂದ ಹೆಚ್ಚಿನ ಅವಧಿಗೆ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಘಟನೆ ನಂತರ ಲೊಕೊ ಪೈಲೆಟ್‌ಗಳ ಸಂಘಟನೆಯು ಆರೋಪಿಸಿದೆ.
ರೈಲ್ವೆ ನಿಯಮದ ಪ್ರಕಾರ, ಚಾಲಕರು 9 ಗಂಟೆ ಕೆಲಸ ಮಾಡಬೇಕು. ಅದು 11 ಗಂಟೆಯವರೆಗೂ ವಿಸ್ತರಿಸಬಹುದು. ಇಂಥ ಹಲವು ಪ್ರಕರಣಗಳನ್ನು ನಾನು ಗಮನಿಸಿದ್ದೇನೆ. ಕೆಲವೊಮ್ಮೆ 15ರಿಂದ 16 ಗಂಟೆಗಳ ಕಾಲ ಚಾಲಕರು ಕೆಲಸ ಮಾಡಿದ ಉದಾಹರಣೆಗಳೂ ಇವೆ. ಹೀಗಿದ್ದರೂ, ಅಧಿಕಾರಿಗಳು 2 ಗಂಟೆಗಳ ವಿಶ್ರಾಂತಿ ಎಂದು ರೋಸ್ಟರ್‌ನಲ್ಲಿ ನಮೂದಿಸುತ್ತಿದ್ದಾರೆ. ಕೆಲಸ ನಡುವೆ ವಿಶ್ರಾಂತಿ ನೀಡಲಾಗುತ್ತಿದೆ ಎಂದು ನಮೂದಿಸಿ ವಂಚಿಸುತ್ತಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷ ಸಂಜಯ್ ಪಂಧಿ ಆರೋಪಿಸಿದ್ದಾರೆ.
ಸಾಮಾನ್ಯವಾಗಿ ಚಾಲಕರು ಮಾಡಬೇಕಾದ ಕೆಲಸಕ್ಕಿಂತ ಹೆಚ್ಚಿನ ದುಡಿಮೆಯನ್ನು ಮಾಡುತ್ತಿದ್ದಾರೆ. ಆದರೆ ಸಿಆರ್‌ಎಸ್ ತನಿಖೆಯಲ್ಲಿ ಚಾಲನೆ ಸಂದರ್ಭದಲ್ಲಿನ ಸುಸ್ತು ಹಾಗೂ ಚುಟುಕು ನಿದ್ರೆ ಇತ್ಯಾದಿ ವೈಜ್ಞಾನಿಕ ಕಾರಣಗಳನ್ನು ಹಾಗೂ ವಾಸ್ತವಾಂಶವನ್ನು ಮರೆಮಾಚಲಾಗಿದೆ ಎಂದು ಅವರು ದೂರಿದ್ದಾರೆ.