June 5, 2026
Friday, June 5, 2026
spot_img

ಕೇರಳಕ್ಕೆ ತಟ್ಟಿದ ಗ್ಯಾರಂಟಿ ಬಿಸಿ: ಮುಖ್ಯಮಂತ್ರಿ ವಿ.ಡಿ.ಸತೀಶನ್ ಮಂಡಿಸಿದ ಶ್ವೇತಪತ್ರದಲ್ಲಿ ಏನಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚುನಾವಣಾ ಸಂದರ್ಭದಲ್ಲಿ ಭರಪೂರ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಅಧಿಕಾರ ಚುಕ್ಕಾಣಿ ಹಿಡಿದ ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರಕ್ಕೆ ಈಗ ರಾಜ್ಯದ ಆರ್ಥಿಕ ಪರಿಸ್ಥಿತಿಯೇ ಅತಿದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೇರಳದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ರಾಜ್ಯವು ಬರೋಬ್ಬರಿ 5.07 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಸಾಲದ ಸುಳಿಗೆ ಸಿಲುಕಿದೆ ಎಂಬ ಆಘಾತಕಾರಿ ಸತ್ಯ ಈಗ ಅಧಿಕೃತವಾಗಿ ಹೊರಬಿದ್ದಿದೆ.

ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆಗಿರುವ ವಿ.ಡಿ. ಸತೀಶನ್ ಅವರು ವಿಧಾನಸಭೆಯಲ್ಲಿ ಮಂಡಿಸಿರುವ ‘ಶ್ವೇತಪತ್ರ’ ರಾಜ್ಯದ ಭೀಕರ ಆರ್ಥಿಕ ದಿವಾಳಿತನವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.

ಹಿಂದಿನ ಎಲ್‌ಡಿಎಫ್ ಸರ್ಕಾರವೇ ಕಾರಣ?

ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಕೆ.ಎಂ. ಚಂದ್ರಶೇಖರ್ ನೇತೃತ್ವದ ತಜ್ಞರ ಸಮಿತಿ ಈ ವರದಿಯನ್ನು ಸಿದ್ಧಪಡಿಸಿದೆ. ಹಿಂದಿನ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರದ ಅವೈಜ್ಞಾನಿಕ ಮತ್ತು ಬೇಜವಾಬ್ದಾರಿಯುತ ಆಡಳಿತವೇ ಕೇರಳ ಇಂತಹ ದುಸ್ಥಿತಿಗೆ ತಲುಪಲು ಮುಖ್ಯ ಕಾರಣ ಎಂದು ಶ್ವೇತಪತ್ರದಲ್ಲಿ ನೇರವಾಗಿ ದೂರಲಾಗಿದೆ. ಮಾಜಿ ಸರ್ಕಾರದ ಅವಧಿಯ ವಿವಿಧ ಯೋಜನೆಗಳು ಹಾಗೂ ಸರ್ಕಾರಿ ನೌಕರರ ವೇತನದ ಬಾಕಿ ಮೊತ್ತವೇ ಸುಮಾರು 49,000 ಕೋಟಿ ರೂಪಾಯಿಗಳಷ್ಟಿದೆ ಎಂದು ವರದಿ ಹೇಳಿದೆ.

ಬೃಹತ್ ಸಾಲದ ಹೊರೆ: ರಾಜ್ಯದ ಒಟ್ಟು ಬಾಧ್ಯತೆಗಳು 5.07 ಲಕ್ಷ ಕೋಟಿ ರೂ. ತಲುಪಿದ್ದು, ಇದು ಕೇರಳದ ಒಟ್ಟು ದೇಶೀಯ ಉತ್ಪನ್ನದ ಶೇಕಡಾ 35.5 ರಷ್ಟಾಗಿದೆ.

ಬಡ್ಡಿ ಪಾವತಿಗೇ ಕೋಟಿ ಕೋಟಿ: ರಾಜ್ಯ ಗಳಿಸುವ ಪ್ರತಿ 100 ರೂಪಾಯಿಯಲ್ಲಿ ಸುಮಾರು 21 ರೂಪಾಯಿಗಳು (ಶೇ. 20.9) ಕೇವಲ ಹಳೇ ಸಾಲಗಳ ಬಡ್ಡಿಯನ್ನು ತೀರಿಸಲು ವಿನಿಯೋಗವಾಗುತ್ತಿದೆ. ಇದು ರಾಷ್ಟ್ರೀಯ ಸರಾಸರಿಗಿಂತ (12.2%) ದುಪ್ಪಟ್ಟಾಗಿದೆ.

ಅಭಿವೃದ್ಧಿ ಕಾರ್ಯಗಳಿಗೆ ಹಣವೇ ಇಲ್ಲ: ರಾಜ್ಯದ ಒಟ್ಟು ಆದಾಯದ ಶೇಕಡಾ 77.6 ರಷ್ಟು ಬೃಹತ್ ಮೊತ್ತ ಕೇವಲ ಸರ್ಕಾರಿ ನೌಕರರ ಸಂಬಳ, ನಿವೃತ್ತಿ ವೇತನ ಮತ್ತು ಸಾಲದ ಬಡ್ಡಿ ಪಾವತಿಗೆ ಬಳಕೆಯಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರ ಅಭಿವೃದ್ಧಿ ಯೋಜನೆಗಳಿಗೆ ಹಣವೇ ಇಲ್ಲದಂತಾಗಿದೆ.

ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿರುವ ಹೊಸ ಸರ್ಕಾರಕ್ಕೆ, ಈ ಸಾಲದ ಸುಳಿಯಿಂದ ಹೊರಬಂದು ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವುದು ಸದ್ಯಕ್ಕೆ ಹಿಮಾಲಯದಷ್ಟೇ ದೊಡ್ಡ ಸವಾಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !