ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತಿನಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನ್ನು ತರಲು ಉತ್ತರಾಖಂಡದಿಂದ ಸೂಚನೆಗಳನ್ನು ಪಡೆದುಕೊಂಡು, ಗುಜರಾತ್ ಸರ್ಕಾರವು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ 5 ಸದಸ್ಯರ ಸಮಿತಿಯನ್ನು ರಚಿಸಿದೆ.
ಈ ಮೂಲಕ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನ್ನು ಜಾರಿಗೆ ತಂದ ಎರಡನೇ ರಾಜ್ಯವಾಗಲಿದೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ ಸಮಿತಿಯು 45 ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ. ಬಳಿಕ, ಅದರ ಅನುಷ್ಠಾನದ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅಗತ್ಯವನ್ನು ನಿರ್ಣಯಿಸಲು ಮತ್ತು ಅದಕ್ಕಾಗಿ ಕರಡು ಮಸೂದೆಯನ್ನು ತಯಾರಿಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲು ನಾವು ನಿರ್ಧರಿಸಿದ್ದೇವೆ ಎಂದು ಸಿಎಂ ಭೂಪೇಂದ್ರ ಪಟೇಲ್ ಹೇಳಿದ್ದಾರೆ.
ಆ ವರದಿಯನ್ನು ಪರಿಶೀಲಿಸಿದ ನಂತರ ರಾಜ್ಯ ಸರ್ಕಾರವು ಯುಸಿಸಿ ಅನುಷ್ಠಾನದ ಬಗ್ಗೆ ನಿರ್ಧರಿಸುತ್ತದೆ. ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸಿಎಲ್ ಮೀನಾ, ವಕೀಲ ಆರ್.ಸಿ ಕೊಡೇಕರ್, ಶಿಕ್ಷಣ ತಜ್ಞೆ ದಕ್ಷೇಶ್ ಠಾಕರ್ ಮತ್ತು ಸಮಾಜ ಸೇವಕಿ ಗೀತಾ ಶ್ರಾಫ್ ಕೂಡ ಇದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಭೂಪೇಂದ್ರ ಪಟೇಲ್, ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಗುಜರಾತ್ ಬದ್ಧವಾಗಿದೆ. ದೇಶಾದ್ಯಂತ ಏಕೀಕೃತ ನಾಗರಿಕ ಸಂಹಿತೆಯನ್ನು (UCC) ಪರಿಚಯಿಸುವ ಕೇಂದ್ರ ಸರ್ಕಾರದ ಯೋಜನೆಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ಎಂದರೇನು?
ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಬಂದರೆ ಧರ್ಮ, ಜನಾಂಗ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೂ ಒಂದೇ ಕಾನೂನು ಅನ್ವಯವಾಗಲಿದೆ. ಒಂದು ರಾಜ್ಯದಲ್ಲಿ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿದರೆ, ಅದು ಮದುವೆ, ವಿಚ್ಛೇದನ, ಮಕ್ಕಳ ದತ್ತು ಮತ್ತು ಆಸ್ತಿ ವಿಭಜನೆಯಂತಹ ವಿಷಯಗಳಲ್ಲಿ ಎಲ್ಲಾ ನಾಗರಿಕರಿಗೆ ಏಕರೂಪವಾಗಿ ಕಾನೂನು ಅನ್ವಯಿಸುತ್ತದೆ.