ಹೊಸದಿಗಂತ ವರದಿ ಬಳ್ಳಾರಿ:
ಚುನಾವಣೆ ಪೂರ್ವದಲ್ಲಿ ರಾಜ್ಯದ ಜನರಿಗೆ ನಾವು ನೀಡಿದ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ, ಈ ಹಿಂದೆ ಗುಜರಾತ್ ಮಾದರಿ ಅಂತಿದ್ದರು, ಈ ಕಾಲ ಹೋಯ್ತು, ಇವಾಗ ‘ಕರ್ನಾಟಕ ಮಾದರಿ’ ಎನ್ನುವ ಕಾಲ ಬಂದಿದೆ ಎಂದು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ಯುವ ಸಬಲೀಕರಣ, ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.
ನಗರದ ನಲ್ಲಚೆರವು ಪ್ರದೇಶದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. 14 ಬಾರಿ ಮಾದರಿ ಬಜೆಟ್ ಮಂಡಿಸಿದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದ್ದೇವೆ. ರಾಜ್ಯದ ಜನರಿಗೆ ನೀಡಿದ ಭರವಸೆಯಂತೆ 5 ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ಅನುಷ್ಠಾನಕ್ಕೆ ತಂದಿದ್ದೇವೆ, ನಮ್ಮ ಸರ್ಕಾರ ಇತರೇ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು.
ಸಾಂಕೇತಿಕವಾಗಿ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿದ್ದೇವೆ. ನಾವು ನೀಡಿದ ಗ್ಯಾರಂಟಿಗಳ ಬಗ್ಗೆ ಬಿಜೆಪಿ ಅವರು ಸುಳ್ಳು ಗ್ಯಾರಂಟಿಗಳು ಎಂದು ಅಪಪ್ರಚಾರ ಮಾಡಿದರು. ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಅವರು ಕೇಳುವ ಕೆಲಸ ಮಾಡಿದರು, ನಾವು ಅನುಷ್ಠಾನಕ್ಕೆ ತರುವ ಕೆಲಸ ಮಾಡಿದೆವು ಎಂದರು.
ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಸಂಡೂರು ಶಾಸಕ ಈ.ತುಕಾರಾಂ ಮಾತನಾಡಿದರು. ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಉಪ ಮೇಯರ್ ಬಿ.ಜಾನಕಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್ಪಿ ರಂಜಿತ್ ಕುಮಾರ್ ಬಂಡಾರು, ಜೆಸ್ಕಾಂ ಇಲಾಖೆಯ ಅಧೀಕ್ಷಕರಾದ ವೆಂಕಟೇಶಲು, ಜಿ.ಪಂ.ಸಿಇಒ ರಾಹುಲ್ ಶರಣಪ್ಪ, ಎಡಿಸಿ ಮಹಮ್ಮದ್ ಜುಬೇದಾರ್, ಮಹಾನಗರ ಪಾಲಿಕೆ ಆಯುಕ್ತರು ಎಸ್.ಎಂ.ರುದ್ರೇಶ್, ಎಸಿ ಹೇಮಂತ್ ಕುಮಾರ್, ಜೆಸ್ಕಾಂ ಇಲಾಖೆಯ ಮುಖ್ಯ ಅಭಿಯಂತರರಾದ ಲಕ್ಷ್ಮಣ್ ಚೌವ್ಹಾಣ್, ಡಿಸಿ ಆನಂದಿ, ಅಧಿಕಾರಿಗಳಾದ ಅಶೋಕ್ ಕುಮಾರ್, ಹುಸೇನ್ ಸಾಬ್, ಲಕ್ಷ್ಮೀ, ಸೇರಿದಂತೆ ಇತರರಿದ್ದರು. ಈ ಸಂದರ್ಭದಲ್ಲಿ ಸಚಿವರು ಕೆಲ ಫಲಾನುಭವಿಗಳಿಗೆ ಶೂನ್ಯ ಬಿಲ್ ನೀಡುವ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿದರು.