ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ 43 ವರ್ಷದ ಹಳೆಯ ಸೇತುವೆ ಕುಸಿದು ಬಿದ್ದು ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಸೇತುವೆ ಕುಸಿದು ಮಹಿಸಾಗರ್ ನದಿಗೆ ಹಲವಾರು ವಾಹನಗಳು ಉರುಳಿ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ.
ಸೇತುವೆ ಕುಸಿದು ಮೃತಪಟ್ಟವರಲ್ಲಿ ರಮೇಶ್ ಪಡಿಯಾರ್, ವೇದಿಕಾ ಪಡಿಯಾರ್, ಮತ್ತು ದರಿಯಾಪುರ ಗ್ರಾಮದ ನೈತಾಯಿಕ್ ಪಾಧಿಯಾರ್, ಮಜತಾನ್‌ನ ಹಸ್ಮುಖ್ ಪರ್ಮಾರ್, ಕಹನ್ವಾ ಗ್ರಾಮದ ವಖತ್ಸಿನ್ಹ್ ಜಾದವ್ ಮತ್ತು ಉಂದೆಲ್ ಗ್ರಾಮದ ಪ್ರವೀಣ್ ಜಾದವ್ ಗುರುತು ಪತ್ತೆಹಚ್ಚಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿ, ನದಿಗೆ ಬಿದ್ದವರ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಮೂವರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ವಡೋದರಾದ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಆನಂದ್ ಶಂಕೆ ವ್ಯಕ್ತಪಡಿಸಿದ್ದಾರೆ.