ಹೊಸದಿಗಂತ ಮುಂಡಗೋಡ:
ಕ್ಷೇತ್ರದ ಮಾಜಿ ಶಾಸಕ ವಿ.ಎಸ್. ಪಾಟೀಲ್ ಅವರ ಆತ್ಮರಕ್ಷಣೆಗಾಗಿ ಇದ್ದ ಡಬಲ್ ಬ್ಯಾರಲ್ ಬಂದೂಕು ಕಳ್ಳತನವಾಗಿರುವ ಘಟನೆ ತಾಲೂಕಿನ ಅಂದಲಗಿ ಗ್ರಾಮದಲ್ಲಿ ನಡೆದಿದೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ.
ವಿ.ಎಸ್. ಪಾಟೀಲರು ತಮ್ಮ ಅಂದಲಗಿ ಗ್ರಾಮದ ಗದ್ದೆಯಲ್ಲಿ ಈ ಬಂದೂಕನ್ನು ಇರಿಸಿದ್ದರು. ಡಿಸೆಂಬರ್ 31ರ ಸಂಜೆಯಿಂದ ಜನವರಿ 1ರ ಬೆಳಿಗ್ಗೆ 10 ಗಂಟೆಯ ನಡುವಿನ ಅವಧಿಯಲ್ಲಿ ದುಷ್ಕರ್ಮಿಗಳು ಗದ್ದೆಗೆ ನುಗ್ಗಿ ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಈ ಬಂದೂಕನ್ನು ಕಳ್ಳತನ ಮಾಡಿದ್ದಾರೆ.
ಬಂದೂಕು ಕಾಣೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಮಾಜಿ ಶಾಸಕರು ಮತ್ತು ಅವರ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಸಂಬಂಧಿಕರ ಬಳಿಯೂ ವಿಚಾರಿಸಿದ್ದಾರೆ. ಎಲ್ಲಿಯೂ ಸುಳಿವು ಸಿಗದ ಕಾರಣ, ಮನೆಯವರೊಂದಿಗೆ ಚರ್ಚಿಸಿ ತಡವಾಗಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಮುಂಡಗೋಡ ಪೊಲೀಸರು ದೂರು ಸ್ವೀಕರಿಸಿದ್ದು, ಕಳುವಾಗಿರುವ ಬಂದೂಕಿನ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.


