ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ ಮಹಿಳಾ ಕೇಡರ್ ಸೇರಿ ಕನಿಷ್ಠ ಮೂವರು ನಕ್ಸಲರು ಸಾವನ್ನಪ್ಪಿದ್ದಾರೆ.
ಗುರುವಾರ ಬೆಳಗಿನ ಜಾವ ಗೋಲಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ದಟ್ಟ ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕ್ಸಲರ ಚಲನವಲನದ ಕುರಿತು ದೊರೆತ ಗುಪ್ತಚರ ಮಾಹಿತಿಯ ಆಧಾರದಲ್ಲಿ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ತಂಡವು ಗೋಲಪಲ್ಲಿ ಪ್ರದೇಶದಲ್ಲಿ ಶೋಧ ಕಾರ್ಯ ಆರಂಭಿಸಿತು. ಈ ವೇಳೆ ಪಡೆಗಳನ್ನು ಗಮನಿಸಿದ ನಕ್ಸಲರು ಏಕಾಏಕಿ ಗುಂಡು ಹಾರಿಸಿದರೆ, ಭದ್ರತಾ ಪಡೆಗಳು ತಕ್ಷಣ ಪ್ರತಿದಾಳಿ ನಡೆಸಿವೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ಮಾಹಿತಿ ನೀಡಿದ್ದಾರೆ. ಕೆಲಕಾಲ ನಡೆದ ಗುಂಡಿನ ಚಕಮಕಿಯ ನಂತರ ಸ್ಥಳ ಪರಿಶೀಲನೆ ನಡೆಸಿದಾಗ, ಒಬ್ಬ ಮಹಿಳೆ ಸೇರಿ ಮೂವರು ನಕ್ಸಲರ ಮೃತದೇಹಗಳು ಪತ್ತೆಯಾಗಿವೆ.
ಮೃತರನ್ನು ಮದ್ವಿ ಜೋಗಾ ಅಲಿಯಾಸ್ ಮುನ್ನಾ ಅಲಿಯಾಸ್ ಜಗತ್, ಸೋಧಿ ಬಂಡಿ ಹಾಗೂ ನುಪ್ಪೋ ಬಜ್ನಿ ಎಂಬ ಮಹಿಳಾ ನಕ್ಸಲ್ ಎಂದು ಗುರುತಿಸಲಾಗಿದೆ. ಇವರು ಕಿಸ್ತಾರಾಮ್ ಪ್ರದೇಶ ಸಮಿತಿಯ ಸಕ್ರಿಯ ಸದಸ್ಯರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಕೌಂಟರ್ ಸ್ಥಳದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.

