ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ.
ಕಿಶ್ತ್ವಾರ್ನ ಸಿಂಗ್ಪೋರಾ ಚತ್ರೂ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಉಗ್ರರೊಂದಿಗೆ ಎನ್ಕೌಂಟರ್ ನಡೆದಿದ್ದು, ಈಗಲೂ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿಶ್ತ್ವಾರ್ನಲ್ಲಿ ನಡೆಯುತ್ತಿರುವ ಎನ್ಕೌಂಟರ್ನಲ್ಲಿ ಹುತಾತ್ಮರಾದ ಯೋಧನನ್ನು ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಅಕೋಲ್ನ ಕರಂಡಿ ತಹಸಿಲ್ ಗ್ರಾಮದ ನಿವಾಸಿ ಸಿಪಾಯಿ ಗಾಯ್ಕರ್ ಸಂದೀಪ್ ಪಾಂಡುರಂಗ್ ಎಂದು ಗುರುತಿಸಲಾಗಿದೆ. ಎನ್ಕೌಂಟರ್ನಲ್ಲಿ ಗಾಯಗೊಂಡ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್ಕೌಂಟರ್ ಈಗಲೂ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
2 ಪ್ಯಾರಾ, 11 ರಾಷ್ಟ್ರೀಯ ರೈಫಲ್ಸ್, 7 ಅಸ್ಸಾಂ ರೈಫಲ್ಸ್ ಮತ್ತು ಜಮ್ಮು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (SOG) ಸೇರಿದಂತೆ ಜಂಟಿ ಪಡೆಗಳು ಗುರುವಾರ ಬೆಳಗ್ಗೆ ಸಿಂಗ್ಪೋರಾ ಚತ್ರೂ ಪ್ರದೇಶದಲ್ಲಿ ಜೈಶ್-ಎ-ಮೊಹಮ್ಮದ್ (JeM) ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಮೂಲಗಳ ಪ್ರಕಾರ ಈ ಪ್ರದೇಶದಲ್ಲಿ ಮೂರರಿಂದ ನಾಲ್ಕು ಭಯೋತ್ಪಾದಕರು ಅಡಗಿದ್ದರು.