ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಆಡಳಿತ ಮತ್ತೆ ಪೆರೋಲ್ ನೀಡಿದೆ. ಈ ಬಾರಿ ಅವರಿಗೆ 40 ದಿನಗಳ ಕಾಲ ಜೈಲಿನಿಂದ ಹೊರಬರುವ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಗುರ್ಮೀತ್ ರಾಮ್ ರಹೀಮ್‌ಗೆ ದೊರೆತ ಪೆರೋಲ್ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಹರಿಯಾಣದ ರೋಹ್ಟಕ್ ವಿಭಾಗೀಯ ಆಯುಕ್ತರು ಪೆರೋಲ್‌ಗೆ ಅನುಮೋದನೆ ನೀಡಿದ್ದು, ಭಾನುವಾರ ಅಥವಾ ಸೋಮವಾರದೊಳಗೆ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸಿರ್ಸಾ ಮೂಲದ ಗುರ್ಮೀತ್ ರಾಮ್ ರಹೀಮ್ ಸಿಂಗ್ ಪ್ರಸ್ತುತ ರೋಹ್ಟಕ್‌ನ ಸುನಾರಿಯಾ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: FOOD | ರೆಸ್ಟೋರೆಂಟ್ ಸ್ಟೈಲ್ ಗಾರ್ಲಿಕ್ ಮಶ್ರೂಮ್ ರೆಸಿಪಿ! ನೀವೂ ಟ್ರೈ ಮಾಡಿ
ತಮ್ಮ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಈ ಸಂಬಂಧ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದರ ಜೊತೆಗೆ, ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಹತ್ಯೆ ಪ್ರಕರಣದಲ್ಲೂ ಗುರ್ಮೀತ್ ರಾಮ್ ರಹೀಮ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಶಿಕ್ಷೆಯು ಪ್ರಸ್ತುತ ಜೈಲು ಅವಧಿ ಪೂರ್ಣಗೊಂಡ ನಂತರ ಜಾರಿಯಾಗಲಿದೆ.

