ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುವಾಹಟಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ ಕೇವಲ 201 ರನ್‌ಗಳಿಗೆ ಆಲೌಟ್ ಆಗಿ ದೊಡ್ಡ ಹಿನ್ನಡೆ ಅನುಭವಿಸಿದೆ. ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿದ ದಕ್ಷಿಣ ಆಫ್ರಿಕಾ 489 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿ ಪಂದ್ಯವನ್ನು ತಮ್ಮ ಹಿಡಿತದಲ್ಲಿಟ್ಟಿತ್ತು.
ದಕ್ಷಿಣ ಆಫ್ರಿಕಾ ಬೌಲರ್‌ಗಳ ದಾಳಿಗೆ ಭಾರತೀಯ ಬ್ಯಾಟಿಂಗ್ ಸಾಲು ಕುಸಿಯುವಂತಾಯಿತು. ಯಶಸ್ವಿ ಜೈಸ್ವಾಲ್ (58) ಮತ್ತು ಕೆಎಲ್ ರಾಹುಲ್ (22) ಒಳ್ಳೆಯ ಆರಂಭ ನೀಡಿದರೂ, ನಂತರ ಬಂದ ಬ್ಯಾಟರ್‌ಗಳು ಪೆವಿಲಿಯನ್‌ಗೆ ವಾಪಸ್ಸಾಗುವುದರಲ್ಲಿ ಹೆಚ್ಚು ಸಮಯ ತೆಗೆದುಕೊಂಡಿರಲಿಲ್ಲ. ಸಾಯಿ ಸುಧರ್ಶನ 15, ಧ್ರುವ್ ಜುರೆಲ್ 0, ರಿಷಭ್ ಪಂತ್ 7, ರವೀಂದ್ರ ಜಡೇಜಾ 6, ನಿತೀಶ್ ಕುಮಾರ್ ರೆಡ್ಡಿ 10 ರನ್‌ಗಳಿಗೇ ಔಟಾದರು.
ಕೆಳಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ (45) ಮತ್ತು ಕುಲ್ದೀಪ್ ಯಾದವ್ (19) 72 ರನ್‌ಗಳ ಉಪಯುಕ್ತ ಜೊತೆಯಾಟ ಆಡಿದರೂ, ತಂಡವನ್ನು ಸಂಕಷ್ಟದಿಂದ ಹೊರತೆಗೆಯಲು ಸಾಕಾಗಲಿಲ್ಲ. ಅಂತಿಮವಾಗಿ ಭಾರತ 201 ರನ್‌ಗಳಿಗೆ ಮಣಿಯಿತು. ದಕ್ಷಿಣ ಆಫ್ರಿಕಾ ಪರ ಮಾರ್ಕೊ ಯಾನ್ಸೆನ್ 6 ವಿಕೆಟ್ ಪಡೆದು ಮಿಂಚಿದರು.
ಮೊದಲ ಇನಿಂಗ್ಸ್‌ನಲ್ಲಿ 288 ರನ್‌ಗಳ ಮುನ್ನಡೆ ಪಡೆದಿದ್ದರೂ, ದಕ್ಷಿಣ ಆಫ್ರಿಕಾ ಫಾಲೋಆನ್ ಹೇರದೇ ಮತ್ತೆ ಬ್ಯಾಟಿಂಗ್ ಮಾಡಲು ನಿರ್ಧರಿಸಿ ಅಚ್ಚರಿ ಮೂಡಿಸಿದೆ. ಎರಡನೇ ಇನಿಂಗ್ಸ್ ಆರಂಭಿಸಲು ಸಿದ್ಧವಾಗಿರುವ ಅವರು ಈಗ ಪಂದ್ಯವನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟಿದ್ದಾರೆ.

