ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ಹೆಚ್-1ಬಿ ವೀಸಾ ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶುಕ್ರವಾರ ದೊಡ್ಡ ಗೊಂದಲ ಉಂಟಾಗಿತ್ತು. ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರು ಹೊಸದಾಗಿ ಅರ್ಜಿ ಹಾಕುವವರು ಮತ್ತು ನವೀಕರಣ ಬಯಸುವವರು ವರ್ಷಕ್ಕೆ 1 ಲಕ್ಷ ಡಾಲರ್ ಶುಲ್ಕ ಪಾವತಿಸಬೇಕೆಂದು ಘೋಷಿಸಿದ್ದರು. ಇದರಿಂದ ವೀಸಾ ಹೊಂದಿರುವ ಸಾವಿರಾರು ವಿದೇಶಿ ಉದ್ಯೋಗಿಗಳು ಆತಂಕಕ್ಕೊಳಗಾದರು.
ಆದರೆ, ಕೆಲವೇ ಗಂಟೆಗಳಲ್ಲೇ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಶನಿವಾರ ಸ್ಪಷ್ಟನೆ ನೀಡಿದರು. ಅವರು ಸಾಮಾಜಿಕ ಮಾಧ್ಯಮದಲ್ಲಿ, “ಇದು ವಾರ್ಷಿಕ ಶುಲ್ಕವಲ್ಲ. ಹೊಸ ಅರ್ಜಿದಾರರಿಗೆ ಮಾತ್ರ ಅನ್ವಯಿಸುವ ಒಂದು ಬಾರಿಯ ಶುಲ್ಕ. ಪ್ರಸ್ತುತ ವೀಸಾ ಹೊಂದಿರುವವರು ಅಥವಾ ನವೀಕರಣ ಬಯಸುವವರಿಗೆ ಅನ್ವಯಿಸುವುದಿಲ್ಲ” ಎಂದು ಹೇಳಿದರು.
ಈ ಸ್ಪಷ್ಟನೆ ಬರುವ ಮುನ್ನ, ಅಮೆರಿಕದ ಹಲವಾರು ಕಂಪನಿಗಳು ತಮ್ಮ ವಿದೇಶಿ ಉದ್ಯೋಗಿಗಳಿಗೆ ತಕ್ಷಣ ವಾಪಸ್ಸು ಬರುವಂತೆ ಸೂಚನೆ ನೀಡಿದ್ದವು. ಕೆಲ ಕಂಪನಿಗಳು ದೇಶ ಬಿಟ್ಟು ಹೊರಡುವುದೇ ಬೇಡ ಎಂದು ನೇರ ಆದೇಶ ನೀಡಿದ್ದವು ಎಂಬ ವರದಿ ಬಂದಿದೆ.
ಹೆಚ್-1ಬಿ ವೀಸಾ ಮೂಲಕ ಅಮೆರಿಕದ ಕಂಪನಿಗಳು ವಿಜ್ಞಾನಿಗಳು, ಎಂಜಿನಿಯರ್‌ಗಳು, ಕಂಪ್ಯೂಟರ್ ಪ್ರೋಗ್ರಾಮರ್‌ಗಳಂತಹ ಪರಿಣಿತರನ್ನು ಕೆಲಸಕ್ಕೆ ಆಮಂತ್ರಿಸುತ್ತವೆ. ಇದು ಸಾಮಾನ್ಯವಾಗಿ ಮೂರು ವರ್ಷಗಳ ಕಾಲಮಾನಕ್ಕೆ ನೀಡಲಾಗುತ್ತದೆ ಮತ್ತು ಆರು ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ.