ಹೊಸದಿಗಂತ ವರದಿ ತುಮಕೂರು:
ತಿಪಟೂರು ತಾಲ್ಲೂಕಿನ ಅಜಾತಶತ್ರು ಎಂದು ಖ್ಯಾತಿ ಪಡೆದಿದ್ದ ರಾಜಕೀಯ ಮುತ್ಸದಿ ಹೋಗವನಘಟ್ಟ ಗ್ರಾಮದ ಎಚ್ .ಬಿ. ದಿವಾಕರ್ ( 71 ) ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಮೃತರು ತಿಪಟೂರು ತಾಲ್ಲೂಕಿನಲ್ಲಿ ವಿವಿಧ ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದು ರಾಜಕೀಯದಲ್ಲಿ ಅಜಾತಶತ್ರು ಎಂದೇ ಖ್ಯಾತಿ ಪಡೆದಿದ್ದರು. ರಾಜಕೀಯದಲ್ಲಿ ಐದು ದಶಕಗಳ ಕಾಲ ಸಕ್ರಿಯರಾಗಿದ್ದು ರಾಜ್ಯದ ವಿವಿಧ ರಾಜಕೀಯ ಮುಖಂಡರುಗಳ ಒಡನಾಡಿಗಳಾಗಿದ್ದರು.
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದಾಗ ಜಾರಿಗೆ ಬಂದಂತಹ ಮಂಡಲ ಪಂಚಾಯಿತಿಯ ಪ್ರಧಾನ ರಾಗಿದ್ದರು. ರಂಗಾಪುರ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಏಷ್ಯಾದಲ್ಲಿಯೇ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆ ಎಂದು ಖ್ಯಾತಿ ಪಡೆದಿದ್ದ ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದು ಐದು ಬಾರಿ ನಿರ್ದೇಶಕರಾಗಿದ್ದಾರೆ. ರಂಗಾಪುರ ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ .
ತಿಪಟೂರು ತಾಲ್ಲೂಕಿನ ಭಾರತೀಯ ಜನತಾ ಪಾರ್ಟಿಯ ತಾಲ್ಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಂಗಾಪುರ ಸುಕ್ಷೇತ್ರದ ಎಸ್ ಪಿ ಎಸ್ ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಮಾರಾಟ ಸಹಕಾರ ಸಂಘ ನಿಯಮಿತ ದ ಅಧ್ಯಕ್ಷರಾಗಿ ಕೊಬ್ಬರಿ ಸೇರಿದಂತೆ ವಿವಿಧ ಆರ್ಥಿಕ ಬೆಳೆಗಳ ಬೆಲೆ ಏರಿಕೆ ವಿಚಾರಕ್ಕೆ ಶ್ರಮಿಸುತ್ತಿದ್ದರು.
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಅಂತ್ಯಸಂಸ್ಕಾರವು ಸ್ವಗ್ರಾಮ ಹೋಗವನಘಟ್ಟ ದ ತೋಟದಲ್ಲಿ ಮಧ್ಯಾಹ್ನ 1:00 ಸುಮಾರಿಗೆ ನೆರವೇರುತ್ತದೆ.