ಹೊಸದಿಗಂತ ಡಿಜಿಟಲ್ ಡೆಸ್ಕ್
ಟಿ 20 ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಇದೇ ತಿಂಗಳ 16 ರಂದು ಆಸ್ಟ್ರೇಲಿಯಾದಲ್ಲಿ ಟಿ 20 ವಿಶ್ವಕಪ್ ಗೆ ಅದ್ದೂರಿ ಚಾಲನೆ ದೊರಕಲಿದೆ. ಈ ಮಹತ್ವದ ಸರಣಿಗೆ ಸಜ್ಜಾಗಲು ಎಲ್ಲಾ ತಂಡಗಳು ಕೊನೆ ಹಂತದ ಸಿದ್ಧತೆಯಲ್ಲಿ ತೊಡಗಿವೆ. ಭಾರತ ಉಪಖಂಡದ ಕ್ರೀಡಾಭಿಮಾನಿಗಳ ಪಾಲಿಗೆ ನೈಜ ವಿಶ್ವಕಪ್ ಅ.23 ರಂದು ಶುರುವಾಗಲಿದೆ. ಅಂದು ನಡೆಯಲಿರುವ ಬ್ಲಾಕ್ ಬಸ್ಟರ್ ಪಂದ್ಯದಲ್ಲಿ ಭಾರತ- ಪಾಕ್ ಸೆಣಸಾಡಲಿವೆ. ಇದಕ್ಕಾಗಿ ಭರ್ಜರಿ ಸಿದ್ಧತೆ ನಡೆಸಿರುವ ಟೀಂ ಇಂಡಿಯಾ ತವರಿನಲ್ಲಿ ಎರಡು ಟಿ 20 ಸರಣಿ ಗೆದ್ದು ಆಸಿಸ್ ನೆಲದಲ್ಲಿ ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದೆ. ಇತ್ತ ಪಾಕ್ ನ್ಯೂಜಿಲೆಂಡ್ ನೆಲದಲ್ಲಿ ತ್ರಿಕೋನ ಟಿ 20 ಸರಣಿ ಗೆದ್ದು ತಾನೂ ವಿಶ್ವಕಪ್ ಗೆ ಸಿದ್ಧ ಎಂಬ ಸಂದೇಶ ರವಾನಿಸಿದೆ.
ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ ನಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ತ್ರಿಕೋನ ಸರಣಿಯನ್ನು ವಶಪಡಿಸಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 163 ರನ್ ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು. 164 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನ 5 ವಿಕೆಟ್‌ಗಳ ನಷ್ಟಕ್ಕೆ 3 ಎಸೆತಗಳು ಬಾಕಿ ಇರುವಂತೆಯೆ ಗುರಿ ಬೆನ್ನತ್ತಿ ವಿಜಯೋತ್ಸವ ಆಚರಿಸಿತು. ಈ ಮೂಲಕ ಪಾಕ್ ಕಿವೀಸ್ ವಿರುದ್ಧದ ಕೊನೆಯ 13 ಪಂದ್ಯಗಳಲ್ಲಿ ಒಂಬತ್ತನೇ ಜಯಗಳಿಸಿದ ದಾಖಲೆ ಬರೆಯಿತು.
ನ್ಯೂಜಿಲೆಂಡ್ ಪರ ಅಗ್ರಕ್ರಮಾಂಕದ ಆಟಗಾರರು ಮುಂಚುವಲ್ಲಿ ವಿಫಲವಾದರು. ಮಾರ್ಟಿನ್ ಗಪ್ಟಿಲ್ ಸ್ಥಾನದಲ್ಲಿ ಪಂದ್ಯದಲ್ಲಿ ಆಡಿದ ಕೇನ್ ವಿಲಿಯಮ್ಸನ್ 33 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಬ್ಲಾಕ್ ಕ್ಯಾಪ್ಸ್ ನಾಯಕ 38 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 59 ರನ್ ಸಿಡಿಸಿದರು. ಕೊನೆಯಲ್ಲಿ ಗ್ಲೆನ್ ಫಿಲಿಪ್ಸ್ ಅವರು 22 ಎಸೆತಗಳಲ್ಲಿ 29 ರನ್ ಸಿಡಿಸಿ ನಾಯಕನಿಗೆ ಕೊಂಚ ಸಾಥ್ ನೀಡಿದರು.
ಮಾರ್ಕ್ ಚಾಪ್ಮನ್ 25 ಮತ್ತು ಜೇಮ್ಸ್ ನೀಶಮ್ 17 ರನ್ ಗಳಿಸಿ ತಂಡ ಗೌರವಾನ್ವಿತ ಮೊತ್ತದತ್ತ ಸಾಗಲು ಕೊಡುಗೆ ನೀಡಿದರು.
ಅಂತಿಮವಾಗಿ ಕಿವೀಸ್ ಏಳು ವಿಕೆಟ್ ನಷ್ಟಕ್ಕೆ 163 ರನ್ ಗಳ ಸ್ಪರ್ಧಾತ್ಮಕ ದಾಖಲಿಸಿದರು. ಪಾಕ್ ಪರ ನಸೀಮ್ ಮತ್ತು ರೌಫ್ ತಲಾ ಎರಡು ವಿಕೆಟ್ ಪಡೆದರು.
ಪಾಕಿಸ್ತಾನ ಮೊದಲ 10 ಓವರ್‌ಗಳಲ್ಲಿ ಕೇಲವ 64 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತು. ಬಾಬರ್ 14 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರೆ, ರಿಜ್ವಾನ್ 29 ಎಸೆತಗಳಲ್ಲಿ 34 ರನ್ ಗಳಿಸಿ ಮರಳಿದರು. ಆ ಬಳಿಕ ಬಂದ ಮೊಹಮ್ಮದ್ ನವಾಜ್ ಮತ್ತು ಹೈದರ್ ಅಲಿ 26 ಎಸೆತಗಳಲ್ಲಿ 56 ರನ್ ಜೊತೆಯಾಟವಾಡಿ ಪಾಕಿಸ್ತಾನವನ್ನು ಗೆಲುವಿನ ಸಮೀಪ ತಂದರು. ಹೈದರ್ 15 ಎಸೆತಗಳಲ್ಲಿ 31 ರನ್ ಗಳಿಸಿ ಔಟಾದರು. ನವಾಜ್ 22 ಎಸೆತಗಳಲ್ಲಿ 38 ರನ್ ಗಳಿಸಿ ಅಜೇಯರಾಗಿ ಉಳಿದರು. ಇಫ್ತಿಕರ್ ಅಹ್ಮದ್ ಭರ್ಜರಿ ಸಿಕ್ಸರ್ ಸಿಡಿಸುವುದರೊಂದಿಗೆ ಪಾಕಿಸ್ತಾನ ಇನ್ನೂ ಮೂರು ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು. ಇಫ್ತಿಕರ್ ಅಹ್ಮದ್ 14 ಎಸೆತಗಳಲ್ಲಿ 25 ರನ್ ಗಳಿಸಿ ಅಜೇಯರಾಗಿ ಉಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ