Sunday, December 21, 2025

ಹಾನಗಲ್ ಗ್ಯಾಂಗ್ ರೇಪ್ ಕೇಸ್: ಯಾದಗಿರಿ ಜಿಲ್ಲೆಗೆ ಆರೋಪಿಯ ಗಡಿಪಾರು

ಹೊಸ ದಿಗಂತ ವರದಿ, ಹಾವೇರಿ :

ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಓರ್ವನಿಗೆ ಇದೀಗ ಗಡಿಪಾರು ಶಿಕ್ಷೆ ವಿಧಿಸಲಾಗಿದೆ.

ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್‌ನಲ್ಲಿ ೨ವರ್ಷದ ಹಿಂದೆ ಮಹಿಳೆಯೊಬ್ಬರ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಓರ್ವ ಆರೋಪಿಗೆ ಸವಣೂರು ಉಪ ವಿಭಾಗಾಧಿಕಾರಿ ಗುರುವಾರ ಗಡಿಪಾರು ಶಿಕ್ಷೆ ವಿಧಿಸಿದ್ದಾರೆ.

ಅಕ್ಕಿ ಆಲೂರಿನ ಸಮೀವುಲ್ಲಾ ಅಬ್ದುಲ್‌ವಾಹಿದ ಲಾಲಾನವರ ಗಡಿಪಾರು ಶಿಕ್ಷೆಗೊಳಗಾದ ಆರೋಪಿತ. ಈತನನ್ನು ಗಡಿಪಾರು ಮಾಡುವಂತೆ ಕೋರಿ ಹಾವೇರಿ ಎಸ್ಪಿ ಕಳೆದ ಜೂನ್‌ನಲ್ಲಿ ಸವಣೂರು ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಲಾಗಿದ್ದು ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ಅವರು ಆರೋಪಿಯನ್ನು ಒಂದು ವರ್ಷದ ಕಾಲ ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಿದ್ದಾರೆ. ಅಲ್ಲದೇ ಆರೋಪಿ ಸಮೀವುಲ್ಲಾ ಯಾದಗಿರಿ ಜಿಲ್ಲೆಯ ಹುಣಸಗಿ ಪೊಲೀಸ್ ಠಾಣೆಗೆ ಪ್ರತಿ ದಿನ ಹಾಜರಾಗಿ ಹಾಜರಾತಿ ನಮೂದಿಸಬೇಕು.

ಬಾಕಿ ಇರುವ ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಲು ಬರುವಾಗ ಹುಣಸಗಿ ಠಾಣೆಗೆ ಮಾಹಿತಿ ನೀಡಬೇಕು ಮತ್ತು ಈ ಸಂದರ್ಭಗಳಲ್ಲಿ ಮುದ್ದೇಬಿಹಾಳ, ಹುನಗುಂದ, ಗದಗ, ಹುಬ್ಬಳ್ಳಿ ಮಾರ್ಗದ ಮೂಲಕವೇ ಹಾವೇರಿ ಜಿಲ್ಲೆಗೆ ಪ್ರವೇಶಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದ ಹಿನ್ನೆಲೆ:
ಸಮೀವುಲ್ಲಾ ಸೇರಿದಂತೆ ೭ಜನರು ನಾಲ್ಕರ ಕ್ರಾಸ್ ಬಳಿಯ ಲಾಡ್ಜ್ ಒಂದರಲ್ಲಿ ಮಹಿಳೆಯೊಬ್ಬರ ಮೇಲೆ ಗ್ಯಾಂಗ್ ರೇಪ್ ಮಾಡಿರುವ ಬಗ್ಗೆ ಹಾನಗಲ್ ಠಾಣೆಯಲ್ಲಿ ೨೦೨೪ರ ಜನವರಿ ೧೧ರಂದು ದೂರು ದಾಖಲಾಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದರು. ಇತ್ತೀಚೆಗೆ ಆರೋಪಿತರು ನ್ಯಾಯಾಲಯದ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. ಈ ವೇಳೆ ಆರೋಪಿಗಳು ಹಾವೇರಿ ಉಪ ಕಾರಾಗೃಹದಿಂದ ಅಕ್ಕಿ ಆಲೂರಿನವರೆಗೆ ತೆರೆದ ಜೀಪಿನಲ್ಲಿ ಕೇಕೆ ಹಾಕುತ್ತಾ ಮೆರವಣಿಗೆ ಮೂಲಕ ತೆರಳಿದ್ದು ಪ್ರಕರಣದ ಸಾಕ್ಷಿದಾರರಿಗೆ ಜೀವ ಬೆದರಿಕೆ ಒಡ್ಡುವ ರೀತಿ ವರ್ತಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.

ಅಲ್ಲದೇ ಜಾಮೀನು ಸಿಕ್ಕ ಬಳಿಕವೂ ಆರೋಪಿ ಸಮೀವುಲ್ಲಾ ತನ್ನ ಸಮಾಜ ಘಾತುಕ ವರ್ತನೆಯನ್ನು ಮುಂದುವರೆಸಿದ್ದು ಹುಡುಗಿಯರನ್ನು ಚುಡಾಯಿಸುವುದು, ನೈತಿಕ ಪೊಲೀಸ್‌ಗಿರಿ, ಹುಡುಗಿಯರ ಅಪಹರಣ, ಹೊಡೆದಾಟ ಮುಂತಾದ ದುಷ್ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾನೆ ಎಂದು ಪೊಲೀಸರು ದೂರಿನಲ್ಲಿ ತಿಳಿಸಿದ್ದರು.

ಈ ದೂರಿನ ವಿಚಾರಣೆ ನಡೆಸಿ ಆರೋಪಿ ಸಮಿವುಲ್ಲಾಗೆ ಗಡಿಪಾರು ಶಿಕ್ಷೆ ವಿಧಿಸಲಾಗಿದೆ, ಯಾದಗಿರಿ ಜಿಲ್ಲೆಯ ಹುಣಸಗಿ ಪೊಲೀಸ್ ಠಾಣೆಗೆ ಪ್ರತಿ ದಿನ ಹಾಜರಾಗಿ ಹಾಜರಾತಿ ಸಲ್ಲಿಸುವಂತೆ ಸವಣೂರು ಎಸಿ ಶುಭಂ ಶುಕ್ಲಾ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

error: Content is protected !!