‘ಕೈ’ ಕಲಹ ಕಹಳೆ: ಇಂದು ಸುರ್ಜೇವಾಲ ಜೊತೆ ಹೈ ವೋಲ್ಟೇಜ್ ಮೀಟಿಂಗ್‌.. 8 ಶಾಸಕರಿಗೆ ಬುಲಾವ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ರಾಜಕೀಯ ಕ್ಷಿಪ್ರಕ್ರಾಂತಿಯ ನಡುವೆ, ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಅಸಮಾಧಾನವನ್ನು ಸಮಾಧಾನಗೊಳಿಸಲು ಹೈಕಮಾಂಡ್ ತುರ್ತು ಕ್ರಮ ಕೈಗೊಂಡಿದೆ. ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಇಂದು ಅಸಮಾಧಾನಗೊಂಡಿರುವ ಶಾಸಕರೊಂದಿಗೆ ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚೆ ನಡೆಸಲು ಸಜ್ಜಾಗಿದ್ದಾರೆ.

ಇತ್ತೀಚೆಗೆ ಬಿ.ಆರ್. ಪಾಟೀಲ್ ಹಾಗೂ ರಾಜು ಕಾಗೆಯಂತಹ ಶಾಸಕರು ಬಹಿರಂಗವಾಗಿ ನೀಡಿದ ಹೇಳಿಕೆಗಳು ಸರ್ಕಾರಕ್ಕೆ ರಾಜಕೀಯವಾಗಿ ಡ್ಯಾಮೇಜ್ ಉಂಟುಮಾಡಿದ್ದು, ಇದಕ್ಕೆ ತಕ್ಷಣದ ತೇಪೆ ಹಚ್ಚಲು ಹೈಕಮಾಂಡ್ ಮುಂದಾಗಿದೆ. ಇಂದು ಮಧ್ಯಾಹ್ನ ಶಾಸಕರು ತಮಗೆ ಎದುರಾಗಿರುವ ಸಮಸ್ಯೆಗಳನ್ನು ‘ಒನ್ ಟು ಒನ್’ ಭೇಟಿಯಲ್ಲಿ ಹಂಚಿಕೊಳ್ಳಲಿದ್ದಾರೆ.

ಇದಕ್ಕಾಗಿ ಒಟ್ಟು 40 ಶಾಸಕರ ಪೈಕಿ ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಮೊದಲ ಹಂತದಲ್ಲಿ 8 ಶಾಸಕರಿಗೆ ಇಂದು ಬುಲಾವ್ ನೀಡಲಾಗಿದೆ. ಮಧ್ಯಾಹ್ನ 1:30ಕ್ಕೆ ಬಿ.ಆರ್. ಪಾಟೀಲ್ ಹಾಗೂ 2 ಗಂಟೆಗೆ ರಾಜು ಕಾಗೆಯ ಭೇಟಿಗೆ ಸಮಯ ನಿಗದಿಯಾಗಿದೆ. ಈ ಸಭೆಯಲ್ಲಿ ರಣದೀಪ್ ಸುರ್ಜೇವಾಲಾ ಶಾಸಕರಿಗೆ ಎಚ್ಚರಿಕೆ ನೀಡುವ ಸಾಧ್ಯತೆ ಇದೆ.

ರಾಜ್ಯ ರಾಜಕಾರಣದಲ್ಲಿ ಒತ್ತಡ ಹೆಚ್ಚುತ್ತಿರುವ ಸಮಯದಲ್ಲಿ, ಸುರ್ಜೇವಾಲಾ ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಉಳಿಯಲಿದ್ದಾರೆ. ಪಕ್ಷದೊಳಗಿನ ಅಸಮಾಧಾನ ಶಮನಗೊಳಿಸಲು ಅವರು ನಿರಂತರವಾಗಿ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಆದರೆ, ಕೆಲವು ಕಾಂಗ್ರೆಸ್ ನಾಯಕರು ಸ್ವತಃ ಸುರ್ಜೇವಾಲಾ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾಸಗಿ ಸಭೆಗಳಲ್ಲಿ ಕೆ.ಎನ್. ರಾಜಣ್ಣ ಅವರು “ಸುರ್ಜೇವಾಲಾ ನನಗೆ ಏನೆನ್ನುತ್ತಾರೆ?” ಎಂಬಂತ ಪ್ರಶ್ನೆ ಕೇಳಿದ್ದಾರೆಂದು ಮೂಲಗಳು ತಿಳಿಸುತ್ತವೆ.

ಬುಲಾವ್ ಪಡೆದ ಶಾಸಕರ ಪಟ್ಟಿ:

ಬಿ.ಆರ್. ಪಾಟೀಲ್ – ಆಳಂದ ಶಾಸಕ
ರಾಜು ಕಾಗೆ – ಕಾಗವಾಡ ಶಾಸಕ
ನಂಜೇಗೌಡ – ಮಾಲೂರು ಶಾಸಕ
ಪ್ರದೀಪ್ ಈಶ್ವರ್ – ಚಿಕ್ಕಬಳ್ಳಾಪುರ ಶಾಸಕ
ರೂಪಕಲಾ – ಕೆಜಿಎಫ್ ಶಾಸಕಿ
ಸುಬ್ಬಾರೆಡ್ಡಿ – ಬಾಗೇಪಲ್ಲಿ ಶಾಸಕ
ನಾರಾಯಣಸ್ವಾಮಿ – ಬಂಗಾರಪೇಟೆ ಶಾಸಕ
ಕೊತ್ತೂರು ಮಂಜುನಾಥ್ – ಕೋಲಾರ ಶಾಸಕ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!