August 26, 2026
Wednesday, August 26, 2026
spot_img

ಹನೂರು ಎನ್‌ಕೌಂಟರ್ ಪ್ರಕರಣ ಸಿಐಡಿಗೆ ಹಸ್ತಾಂತರ: ಡಿಜಿಪಿ ಡಾ. ಎಂ.ಎ. ಸಲೀಂ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಮೂವರು ಬೇಟೆಗಾರರ ಎನ್‌ಕೌಂಟರ್ ಪ್ರಕರಣದ ತನಿಖೆಯನ್ನು ಕರ್ನಾಟಕ ರಾಜ್ಯದ ಡಿಜಿಪಿ ಡಾ. ಎಂ.ಎ. ಸಲೀಂ ಅವರು ತಕ್ಷಣವೇ ಜಾರಿಗೆ ಬರುವಂತೆ ಸಿಐಡಿಗೆ ವರ್ಗಾಯಿಸಿದ್ದಾರೆ.

ಈ ಹೈಪ್ರೊಫೈಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಒಟ್ಟು 4 ಎಫ್‌ಐಆರ್‌ಗಳನ್ನು ಸಿಐಡಿಗೆ ಹಸ್ತಾಂತರಿಸಲು ಅಧಿಕೃತ ಆದೇಶ ಹೊರಡಿಸಲಾಗಿದೆ.

ಸಮೀಪದಿಂದಲೇ ಶೂಟೌಟ್ – ಮರಣೋತ್ತರ ಪರೀಕ್ಷೆಯಲ್ಲಿ ದೃಢ

ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ನಡೆದ ಮೃತರಾದ ಅಂಥೋಣಿಸಾಮಿ, ಜಾನ್ ಪೀಟರ್ ಮತ್ತು ಡೇವಿಡ್ ಕುಮಾರ್ ಅವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅತ್ಯಂತ ಆಘಾತಕಾರಿ ಅಂಶ ಹೊರಬಂದಿದೆ. ಮೃತರ ದೇಹದ ಮೇಲೆ ಗನ್‌ಪೌಡರ್ ಕಲೆಗಳು ಹಾಗೂ ಸುಟ್ಟ ಗಾಯಗಳು ಪತ್ತೆಯಾಗಿದ್ದು, ಇಲಾಖೆಯ ಸಿಬ್ಬಂದಿ ಅತ್ಯಂತ ಸಮೀಪದಿಂದಲೇ ಗುಂಡು ಹಾರಿಸಿದ್ದಾರೆ ಎಂಬ ಅಂಶ ದೃಢಪಟ್ಟಿದೆ. ಇದು ಸ್ಥಳೀಯರು ಮತ್ತು ಮೃತರ ಕುಟುಂಬಸ್ಥರ ವಾದಕ್ಕೆ ದೊಡ್ಡ ಬಲ ತಂದಿದೆ.

ಡಿಜಿಪಿ ಕಟ್ಟುನಿಟ್ಟಿನ ಸೂಚನೆ

ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿರುವ ಡಿಜಿಪಿ, ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಎಲ್ಲಾ ಕೇಸ್ ಫೈಲ್‌ಗಳನ್ನು ಸಂಬಂಧಪಟ್ಟ ತನಿಖಾಧಿಕಾರಿಗಳ ಮೂಲಕ ಸಿಐಡಿಯ ತನಿಖಾಧಿಕಾರಿಗೆ ಖುದ್ದಾಗಿ ಹಸ್ತಾಂತರಿಸಬೇಕು ಎಂದು ಸೂಚಿಸಿದ್ದಾರೆ. ತನಿಖೆ ಪೂರ್ಣಗೊಂಡ ನಂತರ ಸಿಐಡಿ ಇಲಾಖೆಯು ವಿವರವಾದ ವರದಿಯನ್ನು ಡಿಜಿಪಿ ಕಚೇರಿಗೆ ಸಲ್ಲಿಸಲಿದೆ.

ಪ್ರಕರಣದ ಹಿನ್ನೆಲೆ:

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಶೂಟೌಟ್‌ನಲ್ಲಿ ಅಂಥೋಣಿಸಾಮಿ, ಜಾನ್ ಪೀಟರ್ ಮತ್ತು ಡೇವಿಡ್ ಕುಮಾರ್ ಎಂಬ ಮೂವರು ಮೃತಪಟ್ಟಿದ್ದರು. ಮೃತರು ನಾಡ ಬಂದೂಕುಗಳೊಂದಿಗೆ ಬೇಟೆಯಾಡಲು ಅರಣ್ಯ ಪ್ರವೇಶಿಸಿದ್ದರು, ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಶಿಬಿರಗಳನ್ನು ನಾಶಪಡಿಸಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದರು.

ಈ ವೇಳೆ ಮೃತರ ಒಳ ಉಡುಪಿನ ಜೇಬಿನಲ್ಲಿ ನಾಡ ಬಂದೂಕಿಗೆ ಬಳಸುವ ತಲಾ 5 ಅಲ್ಯೂಮಿನಿಯಮ್ ಪ್ರೈಮರ್‌ಗಳು ಪತ್ತೆಯಾಗಿದ್ದವು. ಆದರೆ ಇದು ಉದ್ದೇಶಪೂರ್ವಕವಾಗಿ ನಡೆಸಲಾದ ನಕಲಿ ಎನ್‌ಕೌಂಟರ್ ಎಂದು ಸ್ಥಳೀಯರು ಮತ್ತು ಮೃತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆ ಈ ಪ್ರಕರಣವನ್ನು ಇದೀಗ ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !