August 14, 2026
Friday, August 14, 2026
spot_img

‘ಹರ್ ಘರ್ ತಿರಂಗಾ’ ರಾಷ್ಟ್ರಧ್ವಜದ ಮಹತ್ವ ಹೆಚ್ಚಿಸಿದೆ: ಎಸ್.ಕೆ. ಬಸವರಾಜನ್

ಹೊಸದಿಗಂತ ವರದಿ ಚಿತ್ರದುರ್ಗ:

ಪ್ರಧಾನಿ ನರೇಂದ್ರ ಮೋದಿ ಅವರ ‘ಹರ್ ಘರ್ ತಿರಂಗಾ’ ಅಭಿಯಾನದಿಂದ ಸಾರ್ವಜನಿಕರಲ್ಲಿ ರಾಷ್ಟ್ರಧ್ವಜದ ಮಹತ್ವ, ಗೌರವ ಮತ್ತು ದೇಶಭಕ್ತಿಯ ಭಾವನೆ ಹೆಚ್ಚಾಗಿದೆ ಎಂದು ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಹೇಳಿದರು.

ಚಿತ್ರದುರ್ಗ ನಗರದಲ್ಲಿರುವ ತಮ್ಮ ನಿವಾಸದಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ತ್ರಿವರ್ಣ ಧ್ವಜ ಹಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ರಾಷ್ಟ್ರಧ್ವಜವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಅವಕಾಶಗಳು ಸೀಮಿತವಾಗಿದ್ದವು. ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮುಖ್ಯವಾಗಿ ಶಾಲಾ-ಕಾಲೇಜುಗಳಲ್ಲಿ ಮಾತ್ರ ಧ್ವಜಾರೋಹಣ ನಡೆಯುತ್ತಿತ್ತು ಎಂದರು.

ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ

‘ಹರ್ ಘರ್ ತಿರಂಗಾ’ ಪರಿಕಲ್ಪನೆಯ ನಂತರ ದೇಶದಾದ್ಯಂತ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಜನರಲ್ಲಿ ರಾಷ್ಟ್ರಧ್ವಜದ ಬಗ್ಗೆ ಹೆಚ್ಚಿನ ಅರಿವು ಮೂಡಿದೆ. ಧ್ವಜದ ಬಣ್ಣಗಳು, ಸ್ವರೂಪ ಹಾಗೂ ಅಶೋಕ ಚಕ್ರದ ಮಹತ್ವದ ಕುರಿತು ಗ್ರಾಮೀಣ ಪ್ರದೇಶಗಳಲ್ಲೂ ಜಾಗೃತಿ ಹೆಚ್ಚಾಗಿದೆ ಎಂದು ಬಸವರಾಜನ್ ಹೇಳಿದರು.

ರಾಷ್ಟ್ರಧ್ವಜವು ಕೇವಲ ರಾಷ್ಟ್ರೀಯ ಹಬ್ಬಗಳಿಗೆ ಸೀಮಿತವಾಗದೆ ಪ್ರತಿಯೊಬ್ಬ ಭಾರತೀಯನ ಗೌರವ ಮತ್ತು ದೇಶಭಕ್ತಿಯ ಸಂಕೇತವಾಗಬೇಕು. ಮೂರು ದಿನಗಳ ‘ಹರ್ ಘರ್ ತಿರಂಗಾ’ ಅಭಿಯಾನವು ರಾಷ್ಟ್ರಧ್ವಜವನ್ನು ಜನರ ಹತ್ತಿರಕ್ಕೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿಯೊಬ್ಬರೂ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ದೇಶಾಭಿಮಾನವನ್ನು ವ್ಯಕ್ತಪಡಿಸಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ, ಪರಶುರಾಮ್, ನಾಗರಾಜ್ ಬೇದ್ರೆ, ಚೇತನ ಕುಮಾರ್, ರವಿಕುಮಾರ್, ಪ್ರಸನ್ನ, ಹನುಮಂತಪ್ಪ ಹಾಗೂ ಅರುಣ್ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !