ಹರ ಹರ ಮಹಾದೇವ..ಉಳವಿಯಲ್ಲಿ ಚೆನ್ನಬಸವೇಶ್ವರ ಜಾತ್ರೋತ್ಸವ ಸಂಭ್ರಮ

ಹೊಸದಿಗಂತ ವರದಿ ಜೋಯಿಡಾ:

ವೀರಶೈವರ ಪುಣ್ಯ ಕ್ಷೇತ್ರ ಉಳವಿಯಲ್ಲೀಗ ಶ್ರೀ ಚೆನ್ನಬಸವೇಶ್ವರ ಜಾತ್ರೋತ್ಸವದ ಸಂಭ್ರಮ, ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹರ…ಹರ… ಮಹಾದೇವ ಎನ್ನುವ ಜಯಘೋಷ ದೊಂದಿಗೆ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದು, ತಾಲೂಕಿನಾದ್ಯಂತ ಉಳವಿ ಉತ್ಸವ ಮನೆ ಮಾಡಿದೆ.

ಸಾವಿರಾರು ಚಕ್ಕಡಿಗಳು: ಈ ಬಾರಿ ಜಾತ್ರೋತ್ಸವಕ್ಕೆ ಚಕ್ಕಡಿ ಗಾಡಿಗಳನ್ನು ನಿಷೇಧಿಸಿದರೂ, ರೈತರು ತಮ್ಮ ಪಾರಂಪರಿಕ ಸಂಪ್ರದಾಯವನ್ನು ಮರೆಯದೇ ಉಳವಿ ಜಾತ್ರೆಗೆ ಕುಟುಂಬಸಮೇತರಾಗಿ ಚಕ್ಕಡಿಗಾಡಿಗಳ ಮೂಲಕ ಜಾತ್ರೋತ್ಸವಕ್ಕೆ ಬಂದಿದ್ದು ಕಂಡು ಬಂದಿತ್ತು. ಸುಮಾರು 1500 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಚಕ್ಕಡಿ ಗಾಡಿಗಳು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದು ಕಂಡುಬಂದಿದೆ. ಸಂಪ್ರದಾಯದಂತೆ ತಮ್ಮ ಬಸವನಿಗೆ( ಎತ್ತುಗಳಿಗೆ) ಶ್ರೀ ಚೆನ್ನಬಸವೇಶ್ವರ ದರ್ಶನ ನೀಡಿ ಪೂಜೆ ನಡೆಸಿದ್ದು ವಿಶೇಷವಾಗಿತ್ತು.

ಜಾತ್ರಾ ಆವರಣದಲ್ಲಿ ಅಂಗಡಿ ಮುಂಗಟ್ಟು: ಪ್ರತಿ ವರ್ಷ ವ್ಯಾಪಾರ ಮಳಿಗೆಗಳು ರಥಬೀದಿಯಲ್ಲಿ
ತೆರೆದು ವ್ಯಾಪಾರ ವಹಿವಾಟುಗಳು ನಡೆಸುತ್ತಿದ್ದರು. ಇದರಿಂದ ರಥೋತ್ಸವಕ್ಕೆ ತುಂಬಾ ಇಕ್ಕಟ್ಟಾಗುತಿತ್ತು. ಆದರೆ ಈ ವರ್ಷದಿಂದ ಹೋಸದಾಗಿ ರಥಬೀದಿ ಅಗಲೀಕರಣ ನಡೆಸಿದ್ದು, ರಥೋತ್ಸವಕ್ಕೆ ಸ್ಥಳಾವಕಾಶ ಇಡಲಾಗಿದೆ. ಹಾಗಾಗಿ ವ್ಯಾಪಾರಿ ಮಳಿಗೆಗಳು, ಬೀದಿ ವ್ಯಾಪಾರದ ಅಂಗಡಿಗಳನ್ನು ಜಾತ್ರಾಆವರಣದ ಮೈದಾನಕ್ಕೆ ಸ್ಥಳಾಂತರಿಸಿ ರಥೋತ್ಸವಕ್ಕೆ ಅನುಕೂಲ ಮಾಡಿಕೊಡಲಾಗಿದೆ.

ವಿಶ್ರಾಂತಿ ಪಡೆಯುತ್ತಿರುವ ಎತ್ತುಗಳು: ಬೈಲಹೊಂಗಲ,ವಿಜಯಪುರ, ಹಾವೇರಿ, ಸೇರಿದಂತೆ ಉತ್ತರ ಕರ್ನಾಟಕದ ಎಲ್ಲೆಡೆಯಿಂದ ಬಂದಿರುವ ಎತ್ತಿನ ಬಂಡಿಗಳ ಎತ್ತುಗಳು ಉಳವಿ ಜಾತ್ರಾ ಆವರಣದಲ್ಲಿ ತಮ್ಮ ಮಾಲಿಕರ ಕುಟುಂಬದ ಜೊತೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬಂದಿತ್ತು.

ಮಹಾರಥಕ್ಕೆ ಸಿದ್ದತೆ: ಫೆ. 6 ರಂದು ನಡೆಯಲಿರುವ ಮಹಾರಥೋತ್ಸವಕ್ಕೆ ಈಗಾಗಲೆ ಪೇಂಟಿಂಗ್, ಬಣ್ಣ ಬಣ್ಣದ ಬಾವುಟ ಜೋಡಣೆ, ರುದ್ರಾಕ್ಷಿ ಮಾಲೆಗಳ ಜೋಡಣಾ ಕಾರ್ಯ ಭರದಿಂದ ನಡೆದಿದೆ.
ರಥಬೀದಿ ರಂಗೇರಿದ್ದು, ಮಹಾರಥೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ದೇವಸ್ಥಾನದ ಆಡಳಿತ ಮಂಡಳಿ ಜಾತ್ರೋತ್ಸವ ಸುಗಮ ಹಾಗೂ ಶಾಂತಿಯುತವಾಗಿ ನಡೆಯಲು ಶ್ರಮವಹಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!