ಹೊಸದಿಗಂತ ವರದಿ ಗದಗ:
ಕಂದಾಯ ಇಲಾಖೆಯ ತಾಲೂಕಾಡಳಿತ ವ್ಯವಸ್ಥೆ ಹಾಗೂ ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಗ್ರಾಮ ಆಡಳಿತಾಧಿಕಾರಿಯೊಬ್ಬರು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಡಂಬಳ ಗ್ರಾಮ ಆಡಳಿತಾಧಿಕಾರಿ ಯೋಗೇಶ ಕುರಹಟ್ಟಿ ಅವರು ತಹಶೀಲ್ದಾರ್ ಕಚೇರಿ ಟಪಾಲ್ ಮೂಲಕ ರಾಷ್ಟ್ರಪತಿಯವರಿಗೆ ಪತ್ರ ಬರೆದು ದಯಾಮರಣ ನೀಡುವಂತೆ ವಿನಂತಿಸಿಕೊಂಡಿದ್ದಾರೆ.
ಕಂದಾಯ ಇಲಾಖೆಯ ಸಂಯೋಜನೆ ಆಪ್, ಇ-ಪೋತಿ ಆಂದೋಲನ, ಬೆಳೆ ಕಟಾವು ಪ್ರಯೋಗಗಳು, ಆಧಾರ ಸೀಡಿಂಗ್ ಜೊತೆಗೆ ಇಲಾಖೆಯ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿದರೂ ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದು, ವಿನಾಕಾರಣ ಮೇಲಿಂದ ಮೇಲೆ ನೋಟಿಸ್ ನೀಡಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಕಂದಾಯ ಇಲಾಖೆಗಳ ಸಾಕಷ್ಟು ಯೋಜನೆಗಳ ನಿರ್ವಹಣೆ ಕುರಿತಂತೆ ಮೇಲಾಧಿಕಾರಿಗಳ ಒತ್ತಡದ ಮಧ್ಯೆ ಕೆಲಸ ನಿರ್ವಹಿಸಿದರೂ ಅಧಿಕಾರಿಗಳಿಂದ ಕಿರುಕುಳ ತಪ್ಪುತ್ತಿಲ್ಲ. ದಿನಚರಿ ಕೊಟ್ಟಿಲ್ಲ ಎಂದು ಆರೋಪ ಮಾಡುತ್ತ ವ್ಯಕ್ತಿಗತವಾಗಿ ಕಿರುಕುಳ ನೀಡುತ್ತಿದ್ದು, ಕಳೆದ ಎರಡು ತಿಂಗಳಿನಿಂದ ವೇತನ ತಡೆಹಿಡಿಯಲಾಗಿದೆ. ಅನಾರೋಗ್ಯ ಪೀಡಿತ ತಾಯಿ ಹಾಗೂ ಸ್ವತಃ ನಾನು ಕೂಡ ಅನಾರೋಗ್ಯ ಪೀಡಿತನಾಗಿದ್ದು, ವೇತನ ತಡೆಹಿಡಿದಿದ್ದರಿಂದ ಜೀವನ ಸಾಗಿಸುವುದು ಕಷ್ಟವಾಗಿದೆ. ಈ ಹಿಂದೆಯೂ ಕೆಲ ತಿಂಗಳ ವೇತನ ತಡೆಹಿಡಿಯಲಾಗಿತ್ತು ಎಂದು ದಯಾಮರಣ ಪತ್ರದ ಮೂಲಕ ರಾಷ್ಟ್ರಪತಿಗಳಿಗೆ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.


