ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿರುಕುಳ ಪ್ರಕರಣ ಸಂಬಂಧಿಸಿದಂತೆ ಯುವ ಕಾಂಗ್ರೆಸ್ (ಐವೈಸಿ) ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಶ್ರೀನಿವಾಸ್ ಅವರು ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಹೇಳಿದ ತ್ರಿಸದಸ್ಯ ನ್ಯಾಯಪೀಠವು ಮೇ 17ರಂದು ತಾನು ನೀಡಿದ್ದ ಆದೇಶ ಅಬಾಧಿತ ಎಂದು ತಿಳಿಸಿತು.
ಸುಪ್ರೀಂ ಕೋರ್ಟ್ ಶ್ರೀನಿವಾಸ್ ಅವರಿಗೆ ಮೇ 17ರಂದು ಬಂಧನದಿಂದ ರಕ್ಷಣೆ ಒದಗಿಸಿತ್ತು. ಶ್ರೀನಿವಾಸ್ ವಿರುದ್ಧ ದೂರು ದಾಖಲಿಸಿದ್ದ ಮಹಿಳೆಯು, ‘ಅಶ್ಲೀಲ ಮಾತುಗಳ ಮೂಲಕ ಶ್ರೀನಿವಾಸ್ ಅವರು ಕಳೆದ ಆರು ತಿಂಗಳುಗಳಿಂದ ಕಿರುಕುಳ ನೀಡುತ್ತಿದ್ದಾರೆ’ ಎಂದು ಹೇಳಿದ್ದರು. ಪಕ್ಷದ ಹಿರಿಯ ನಾಯಕರಿಗೆ ತಮ್ಮ ವಿರುದ್ಧ ದೂರು ಸಲ್ಲಿಸುತ್ತಿದ್ದರೆ ಪರಿಣಾಮ ಕೆಟ್ಟದ್ದಾಗಿರುತ್ತದೆ ಎಂಬುದಾಗಿ ಬೆದರಿಸುತ್ತಿದ್ದರು ಎಂದೂ ದೂರಿನಲ್ಲಿ ಹೇಳಿದ್ದರು.