ಫೈನಾನ್ಸ್ ನಲ್ಲಿ ಸಾಲ ಪಡೆಯಲು ಜಾಮೀನು ಹಾಕುವಂತೆ ಕಿರುಕುಳ: ಮಹಿಳೆ ಆತ್ಮಹತ್ಯೆ

ಹೊಸ ದಿಗಂತ ವರದಿ,ಹಾಸನ :

ಫೈನಾನ್ಸ್ ನಲ್ಲಿ ಸಾಲ ಪಡೆಯಲು ಜಾಮೀನು ಹಾಕುವಂತೆ ಬೇದರಿಕೆ ಹಾಕಿದ ಹಿನ್ನೆಲೆ ಜಮುನಾ (೪೪) ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿ ನಡೆದಿದ್ದು, ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಬಂಧಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಸ್ಥಳೀಯ ನಿವಾಸಿ ಭರತ್ ಮಾತನಾಡಿ, ಲಕ್ಕುಂದ ಗ್ರಾಮದ ಸಂದೀಪ್ ಮತ್ತು ಬಿಕ್ಕೋಡಿನ ಜಮುನಾ ಅವರ ಮನೆ ಪಕ್ಕದಲ್ಲಿ ಸೈಬರ್ ಸೆಂಟರ್ ನಡೆಸುತ್ತಿದ್ದ ಸಂದೀಪ್ ಎಂಬುವರ ಪತ್ನಿ ಧನುಶ್ರೀ ಅವರು ಜಮುನಾ ಅರೊಂದಿಗೆ ಒಡನಾಟ ಇಟ್ಟುಕೊಂಡು, ಪ್ರವಾಸಕ್ಕೆ ತೆರಳುವ ನೆಪದಲ್ಲಿ ಚಿಕ್ಕಮಗಳೂರಿನ ಮಣಪುರಂ ಪೈನಾನ್ಸ್ಗೆ ಫೆ.೨೦ ರಂದು ತೆರಳಿ ನಮಗೆ ತುರ್ತುಗಾಗಿ ೧೦ ಲಕ್ಷ ರೂಪಾಯಿ ಅಗತ್ಯವಿದ್ದು, ನೀವು ಜಾಮಿನು ಹಾಕಿಬೇಕು ಎಂದು ಒತ್ತಾಯ ಮಾಡಿದ್ದರು. ಅದಕ್ಕೆ ಜಮುನಾ ಒಪ್ಪಿರಲಿಲ್ಲ. ಬಳಿಕ ಸಂದೀಪ್ ಮತ್ತು ಧನುಶ್ರೀ ಬೆದರಿಕೆ ಹಾಕದಿದ್ದರೆ ನಿನ್ನ ಮಗನನ್ನು ಉಳಿಸುವುದಿಲ್ಲ ಎಂದು ಪದೇ, ಪದೇ ಫೋನ್ ಮಾಡಿ ಬೆದರಿಕೆ ಹಾಕಿದ ಕಾರಣದಿಂದ ಆಕೆ ಡೆತ್‌ನೋಟ್ ಬರೆದಿಟ್ಟು ಫೆ.೨೪ ರಂದು ರಾತ್ರಿ ವಿಷಯ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು ಎಂದು ವಿವರಿಸಿದರು.

ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಆಕೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾ.೩ ರಂದು ಮೃತಪಟ್ಟರು. ಪೊಲೀಸರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎಂದು ಒತ್ತಾಯಿಸಿದರು.

ಜಮುನಾ ಪುತ್ರ ಸಾತ್ವಿಕ್ ಮಾತನಾಡಿ, ಆರು ತಿಂಗಳ ಹಿಂದೆ ತಂದೆ ಕಳೆದುಕೊಂಡ ನಾನು ಈಗ ತಾಯಿಯನ್ನೂ ಕಳೆದುಕೊಂಡು ಅನಾಥನಾಗಿರುವೆ. ಈ ವಿಷಯವನ್ನು ಇಲ್ಲಿಗೆ ಬಿಡು, ಇಲ್ಲವಾದರೆ ನಿನ್ನನ್ನು ಮುಗಿಸುವೆ ಎಂದು ಸಂದೀಪ್ ಬೆದರಿಕೆ ಹಾಕಿದ್ದಾನೆ. ಆಸ್ಪತ್ರೆಗೂ ಬಂದು ಎಚ್ಚರಿಕೆ ಕೊಟ್ಟು ಹೋಗಿದ್ದಾನೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಯದುನಂದನ, ಚಂದನ್, ಮಿಥುನ್, ಭರತ್, ಕಾರ್ತಿಕ್, ಸಚ್ಚಿನ್, ಕುಸುಮ, ಚಂದ್ರಕಲಾ, ಸುಜತಾ, ಕುಸುಮಮ್ಮ, ಕುಟುಂಬ ವರ್ಗದವರು ಹಾಗೂ ಸ್ಥಳೀಯರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!