ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರಾವಣ ಮಾಸದ ವಿಶೇಷ ದಿನವಾಗಿರುವ ಭಾನುವಾರ ಮಾನ್ಸಾ ದೇವಿ ದೇವಾಲಯದಲ್ಲಿ ಭಕ್ತರ ಭಾರಿ ನೂಕುನುಗ್ಗಲು ಉಂಟಾಗಿ, ಕಾಲ್ತುಳಿತ ಸಂಭವಿಸಿ 6 ಭಕ್ತರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶ್ರಾವಣ ಮಾಸದ ಪವಿತ್ರ ದಿನ ಹಾಗೂ ರಜಾದಿನದ ಹಿನ್ನೆಲೆ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ದರ್ಶನಕ್ಕಾಗಿ ಆಗಮಿಸಿದ್ದ ಭಕ್ತರ ಸಂಖ್ಯೆ ನಿಯಂತ್ರಣಕ್ಕೆ ಸಿಗದ ಮಟ್ಟಿಗೆ ಏರಿಕೆಯಾಗಿತ್ತು. ಈ ವೇಳೆ ಕೆಲವರಿಗೆ ವಿದ್ಯುತ್ ಶಾಕ್ ತಗುಲಿದ ಕಾರಣ ಆತಂಕಗೊಂಡ ಭಕ್ತರು ಹೊರಕ್ಕೆ ಓಡಿದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ.
ಪೊಲೀಸರು ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇಗುಲದ ಆವರಣದಲ್ಲಿ ವಿದ್ಯುತ್ ವೈರ್ ಸಮಸ್ಯೆ ಇದ್ದಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.
ಈ ದುರಂತಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ, ಸೂಕ್ತ ಚಿಕಿತ್ಸೆ ನೀಡಲು ಹಾಗೂ ಪರಿಸ್ಥಿತಿ ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.